ಸುದ್ದಿವಿಜಯ, ಜಗಳೂರು:ರಾಜ್ಯ ಸರಕಾರದ ಭರವಸೆಯಿಂದ ಹೊರಾಟವನ್ನು ತಾತ್ಕಾಲಿಕ ಹಿಂಪಡೆದಿದ್ದು ಸದಾಶಿವ ಆಯೋಗ ಜಾರಿಗೊಳಿಸದಿದ್ದರೆ ಮೂರು ಪಕ್ಷಗಳ ವಿರುದ್ದ ಬೃಹತ್ ಮಟ್ಟದ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಎಚ್ಚರಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕರ್ನಾಟಕ ಮಾದಿಗ ಸಮಾಜದಿಂದ ಹಮ್ಮಿಕೊಂಡಿದ್ದ ಕರ್ನಾಟಕ ಮಾದಿಗ ಸಮಾಜದ ತಾಲೂಕು ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನ ಬದ್ದ ಹಕ್ಕುಗಳಿಗಾಗಿ 70 ರ ದಶಕದಲ್ಲಿ ಫ್ರೊ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ದಲಿತ ಸಂಘಟನೆ ಹುಟ್ಟಿಕೊಂಡಿತು. ತದನಂತರ ಹಲವು ದಲಿತಪರ ಸಂಘಟನೆಗಳು ಹೊರಾಟ ನಡೆಸುತ್ತಾ ಬಂದರೂ ಮಾದಿಗ ಸಮಾಜ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಸಾಧಿಸಿಲ್ಲ.
ಈ ನಿಟ್ಟಿನಲ್ಲಿ ಕರ್ನಾಟಕ ಮಾದಿಗ ಸಮಾಜ ಸಂಘಟನೆ ಬಲವರ್ಧನೆಗೊಳಿಸಿ ಸೌಲಭ್ಯಕ್ಕಾಗಿ ಪಾರದರ್ಶಕವಾಗಿ ಹೊರಾಟ ನಡೆಸಲಾಗುವುದು ಎಂದರು.
ದೇವರ ಮೇಲೆನಂಬಿಕೆಯಿರಲಿ ಮೂಢನಂಬಿಕೆ ಸಲ್ಲದು ಮಾದಿಗ ಸಮಾಜದವರು ಜಾಗೃತರಾಗಿ ಶಿಕ್ಷಣ ಪಡೆದು. ದುಡಿಮೆಗೆ ಶ್ರಮಿಸಿ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಸಹೋದರ ಸಮಾಜದವರ ಒಗ್ಗಟ್ಟು ನಮಗೆ ಮಾದರಿಯಾಗಬೇಕು. ಮಾದಿಗ ಸಮಾಜದ ಚುನಾಯಿತ ರಾಜಕಾರಣಿಗಳು ರಾಜಕೀಯ ಗುಲಾಮರಂತೆ ವರ್ತಿಸುತ್ತಿರುವುದು ಬೇಸರ ತಂದಿದೆ. ಈ ಮಧ್ಯೆ ಲಂಬಾಣಿ, ಭೋವಿಗಳು ಲಾಭ ಪಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, ಮಾದಿಗ ಸಮಾಜ ಅತ್ಯಂತ ಶೋಷಣೆ ಹಾಗೂ ತುಳಿತಕ್ಕೊಳಗಾಗಿದೆ. ನ್ಯಾಯಬದ್ದ ಹಕ್ಕುಗಳಿಗಾಗಿ ಅಸೂಯೆ ಸ್ವಪ್ರತಿಷ್ಠೆ ತೊರೆದು ಒಕ್ಕೋರಲಿನ ಹೋರಾಟ ಅನಿವಾರ್ಯ. ಆದ್ದರಿಂದ ರಾಜ್ಯದ 8 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಕರ್ನಾಟಕ ಮಾದಿಗ ಸಮಾಜ ಸಂಘಟಿತವಾಗಿದೆ ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಿಗ ಸಮಾಜದ ಧ್ವನಿಯಾಗಿರುವೆ ತಾಲೂಕಿನಲ್ಲಿ ಸಮಾಜದ ಅಭಿವೃದ್ದಿಗೆ ಸದಾ ಕಾಳಜಿವಹಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನ ಮಾದಿಗ ಸಮಾಜದ ವಿದ್ಯಾರ್ಥಿನಿ ಮೆಡಿಕಲ್ ವಿದ್ಯಾಭ್ಯಾಸಕ್ಕೆ ಮುಂದಾಗಿದ್ದು.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ವ್ಯಾಸಂಗಮಾಡಲು ವೈಯಕ್ತಿಕ ಸಹಕಾರವಿದೆ ಎಂದರು.
ಸಂದರ್ಭದಲ್ಲಿ ಕರ್ನಾಟಕ ಮಾದಿಗ ಸಮಾಜದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಶೇಖರಪ್ಪ,ವಿವಿಧ ಜಿಲ್ಲೆಗಳ ಪದಾಧಿಕಾರಿಗಳಾದ ಸುನಿಲ್,ರಘು,ಆನಂದ್,ತಾಲೂಕು ಪದಾಧಿಕಾರಿಗಳಾದ ಪಲ್ಲಾಗಟ್ಟೆ ಬಸವರಾಜ್,ಪ್ರಭು,ರಮೇಶ್ ಸೇರಿದಂತೆ ಇದ್ದರು.