ಸುದ್ದಿವಿಜಯ,ಜಗಳೂರು: ತಾಲೂಕಿನ ಮುಷ್ಟಿಗರಹಳ್ಳಿ ಗ್ರಾಮದ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿ ಬುಧವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಸಾಗುವಳಿದರರು ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ಧಾವಿಸಿದ ರೈತರು ತಾಲೂಕು ಕಚೇರಿ ಮುಂಭಾಗ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು. ಸುಮಾರು ವರ್ಷಗಳಿಂದಲೂ ಸಾಗುವಳಿ ಮಾಡುತ್ತಿರುವ ನಮಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ತಹಸೀಲ್ದಾರ್ ಗ್ರೇಡ್-2 ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಮುಷ್ಟಿಗರಹಳ್ಳಿ ಗ್ರಾಮದಲ್ಲಿ ಜಮೀನು ಉಳುಮೆ ಮಾಡುತ್ತಿರುವ 18 ಜನರು ಬಡ ರೈತರು. ಕೂಲಿ ನಾಲಿ ಮಾಡಿ ಜೀವನ ನಡೆಸಬೇಕು. ಮಳೆ ಬಂದಾಗ ಕೃಷಿ ಚಟುವಟಿಕೆ ಮಾಡಿಕೊಂಡು ಬರುವ ಆದಾಯದಲ್ಲಿ ವರ್ಷವಿಡಿ ಜೀವನ ನಡೆಸಬೇಕು.
ರೈತರು ಸುಮಾರು 60 ವರ್ಷಗಳಿಂದಲೂ ಬಗರ್ ಹುಕ್ಕು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈವರೆಗೂ ಇವರಿಗೆ ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ವಿಫಲರಾಗಿದ್ದಾರೆ ಎಂದು ಆಪಾದಿಸಿದರು.
ಗ್ರಾಮದ ಸ.ನಂ 114/1 ಮತ್ತು 99,20,108ರಲ್ಲಿ 18 ಜನ ರೈತರು ಭೂಮಿ ಫಲಾನುಭವಿಗಳಾಗಿದ್ದಾರೆ. ಕೆಲ ರೈತರಿಗೆ ಹಕ್ಕು ಪತ್ರ ನೀಡಲಾಗಿದೆ. ಆದರೆ ಈ ರೈತರಿಗೆ ನೀಡುವಲ್ಲಿ ಏಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ.
ಕೆಲವರು ಹಣದ ಬೇಡಿಕೆಯನ್ನಿಟ್ಟಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ. ಹಾಗಾಗಿ ತಿಂಗಳೊಳಗೆ ಎಲ್ಲಾ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡಬೇಕು, ವಿಳಂಬ ಮಾಡಿದರೆ ತಾಲೂಕು ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು. ನಿರ್ಲಕ್ಷ ತೋರಿದ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವವರೆಗೂ ಬಿಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಜೆ. ಲಕ್ಷ್ಮಣ್, ಪರಸಪ್ಪ, ಅಂಜಿನಪ್ಪ, ಮಂಜುನಾಥ್, ತಿಪ್ಪಯ್ಯ, ವೀರಪ್ಪ, ಮಾರಪ್ಪ, ತಿಮ್ಮಣ್ಣ, ವಿರೂಪಾಕ್ಷಪ್ಪ, ಯಶೋಧಮ, ಶಾಂತಮ್ಮ, ಸರೋಜಮ್ಮ, ಗಂಗಮ್ಮ, ತಿಪ್ಪಯ್ಯ, ನಂದಿನಮ್ಮ, ವೀರಪ್ಪ, ಮಾರಪ್ಪ, ತಿಮ್ಮಣ್ಣ, ಸುಶೀಲಮ್ಮ, ಮರಿಯಮ್ಮ ಸೇರಿದಂತೆ ಮತ್ತಿತರಿದ್ದರು.