ಸುದ್ದಿವಿಜಯ,ಜಗಳೂರು:ಫ್ಯಾಶನ್ ಡಿಸೈನ್ನಲ್ಲಿ ಕೌಶಲ ತರಬೇತಿ ಅಳವಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳ ಬೇಕು ಎಂದು ನಬಾರ್ಡ್ ಬ್ಯಾಂಕ್ ವ್ಯವಸ್ಥಾಪಕಿ ರಶ್ಮಿ ರೇಖಾ ಅವರು ಸಲಹೆ ನೀಡಿದರು.
ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ಕಾವೇರಿ ಸಮೃದ್ದ ನಿರ್ವಿತ ಸಂಪನ್ಮೂಲ ಸಂಸ್ಥೆ ಹಾಗೂ ನಬಾರ್ಡ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿರುವ ಮಹಿಳೆಯರಿಗೆ ಫ್ಯಾಶನ್ ಡಿಸೈನ್ ತರಬೇತಿ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಬಾರ್ಡ್ ಬ್ಯಾಂಕ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ರಾಜ್ಯದ ಬೃಹತ್ ಮಟ್ಟದ ವಹಿವಾಟು ಹೊಂದಿದ ಕಂಪನಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಗ್ರಾಮೀಣ ಭಾಗದ ನಿರುದ್ಯೋಗಿ ಯುವತಿಯರು ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸೋಮವಾರದಿಂದ ಆರಂಭವಾದ 15 ದಿನಗಳ ತರಬೇತಿ ಶಿಬಿರದ ನಂತರ ಕಾವೇರಿ ಸಂಸ್ಥೆ ತಮ್ಮ ವೈಯಕ್ತಿಕ ವೃತ್ತಿಗಳನ್ನು ಸಮೀಕ್ಷೆ ನಡೆಸಿ ಬ್ಯಾಂಕ್ ಗಳ ಸಹಾಯಧನದ ಮೂಲಕ ಸ್ವಯಂ ಉದ್ಯೋಗ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಜ್ಞಾನತರಂಗಿಣಿ ವಿದ್ಯಾಸಂಸ್ಥೆಯ ಡಾ.ಪಿ.ಎಸ್.ಅರವಿಂದನ್ ಮಾತನಾಡಿ, ಸಂವಿಧಾನ ಬದ್ದ ಮೀಸಲಾತಿ ಮಧ್ಯೆಯೂ ಆಧುನಿಕ ಯುಗದಲ್ಲಿ ಮಹಿಳೆಯರು ಕೌಟುಂಬಿಕ, ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿರುವುದು ವಿಷಾದನೀಯ ಎಂದರು.
ಮಹಿಳೆಯರು ಕೌಶಲ ತರಬೇತಿ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಅಲ್ಲದೆ ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಬೇಕು ಎಂದು ತಿಳಿಸಿದರು.
ಕಾವೇರಿ ಸಂಪನ್ಮೂಲ ಸಂಸ್ಥೆಯ ಸಿ ಎಸ್.ಗೌಡ ಮಾತನಾಡಿ,ಮಹಿಳೆಯರು ಕುಟುಂಬದ ಒತ್ತಡಗಳನ್ನು ಬದಿಗೊತ್ತಿ ಕೌಶಲ ತರಬೇತಿಯನ್ನು ಶ್ರದ್ದೆಯಿಂದ ಕಲಿಯಬೇಕು.
ಗಳಿಸಿದ ವಿದ್ಯೆಯನ್ನು ಯಾರೊಬ್ಬರೂ ಕದಿಯಲು ಸಾಧ್ಯವಿಲ್ಲ.ಇದರಿಂದ ಕುಟುಂಬದ ಆದಾಯ ಗಳಿಕೆಗೆ ಪೂರಕವಾಗಲಿದೆ ಎಂದು ಹೇಳಿದರು.
ಈ ವೇಳೆ ಫ್ಯಾಶನ್ ಡಿಸೈನ್ ತರಬೇತುದಾರರಾದ ದಿವ್ಯಶ್ರೀ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಪ್ರದೀಪ್ ಕುಮಾರ್, ಸಂಸ್ಥೆಯ ರವಿಕುಮಾರ್, ಶರೀಫ, ತಿಮ್ಮಕ್ಕ, ಕೌಶಲ್ಯ, ಮೇಘ, ಕಾವೇರಿ ಸೇರಿದಂತೆ ಇದ್ದರು.