ಸುದ್ದಿವಿಜಯ, ಜಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಗೋದಾಮು ನಿರ್ಮಾಣಕ್ಕೆ 10.5 ಲಕ್ಷ ರೂಗಳ ಆರ್ಥಿಕ ನೆರವು ಬಿಡುಗಡೆ ಯಾಗಿದೆ ಎಂದು ಕೃಷಿ ಇಲಾಖೆ ಜಿಲ್ಲಾ ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಬಿದರಕೆರೆಯಲ್ಲಿ ಶನಿವಾರ ಗೋದಾಮು ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತಾನಾಡಿದ ಅವರು, ರೈತರಿಗಾಗಿ ಆರಂಭವಾಗಿರುವ ಅಮೃತ ರೈತ ಉತ್ಪಾದಕ ಕಂಪನಿಗಳು ವರದಾನ ವಾಗಲಿವೆ.
ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಈ ಎಫ್ಪಿಸಿಗಳ ಬಲವರ್ಧನೆಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲಾನಯನ ಅಭಿವೃದ್ಧಿ ಘಟಕ-2.0 ಅಡಿಯಲ್ಲಿ ಪ್ರವೇಶ ಧ್ವಾರ ಚಟುವಟಿಕೆಗಳ ಅಡಿ ರೈತ ಉತ್ಪಾದಕ ಕಂಪನಿಗಳಿಗೆ ಗೋದಾಮು ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.
ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಆರಂಭವಾಗಿರುವ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಗೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ 10.5 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಈ ಹಣದ ಜೊತೆಗೆ ಷೇರು ಹಣದ ಶೇ.50 ರಷ್ಟು ಬಳಸಿಕೊಂಡು ಗೋದಾಮು ನಿರ್ಮಾಣ ಮಾಡಿಕೊಂಡರೆ ಇನ್ಪುಟ್ ಮತ್ತು ಔಟ್ಪುಟ್ ವ್ಯವಹಾರಕ್ಕೆ ಅನುಕೂಲವಾಗುತ್ತದೆ.
ಅಲ್ಲದೇ ಆಯಿಲ್ ಮಿಲ್, ದಾಲ್ ಮಿಲ್, ಆಹಾರ ಪದಾರ್ಥಗಳ ಪ್ರೋಸೆಸಿಂಗ್ ಯುನಿಟ್ಗಾಗಿ ಇನ್ನು ಹೆಚ್ಚಿನ ಹಣವನ್ನು ಇಲಾಖೆ ನೀಡಲು ಸಿದ್ಧವಿದೆ. ಅದನ್ನು ಬಳಸಿಕೊಂಡು ರೈತರು ಬೆಳೆದ ಪದಾರ್ಥಗಳಿಗೆ ಸ್ಥಳೀಯ ಮಾರುಕಟ್ಟೆಗಳನ್ನು ಸೃಷ್ಟಿಸಿ, ಮೌಲ್ಯವರ್ಧನೆ ಮಾಡಿ ಬ್ರ್ಯಾಂಡ್ ಮಾಡಿಕೊಂಡು ಆರ್ಥಿಕ ಲಾಭಗಳಿಸಿ ಎಂದು ರೈತರಿಗೆ ಮಾಹಿತಿ ನೀಡಿದರು.
ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ್ ಮಾತನಾಡಿ, ಈಗಾಗಲೇ ಬಿದರಕೆರೆ ಎಫ್ಪಿಓ ರೈತರಿಗೆ ಸಾಕಷ್ಟು ನೆರವಾಗಿದೆ. ಲೆಕ್ಕಪತ್ರಗಳ ವ್ಯವಹಾರಗಳು ಸಹ ಅಚ್ಚುಕಟ್ಟು ನಿರ್ವಾಹಣೆ ಮಾಡಿದ ಹೆಗ್ಗಳಿಗೆ ಈ ಕಂಪನಿಗೆ ಇದೆ. ಮುಂದಿನ ದಿನಗಳಲ್ಲಿ ಕೃಷಿ ಇಲಾಖೆ ಸಹಯೋಗ ಮತ್ತು ಕೆವಿಕೆ ಮಾರ್ಗದರ್ಶನದಲ್ಲಿ ಎಫ್ಪಿಓ ಬಲವರ್ಧನೆಗೆ ಬದ್ಧವಾಗಿದ್ದೇವೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್, ಎಫ್ಪಿಓ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್, ಉಪಾಧ್ಯಕ್ಷರಾದ ಸೋಮನಗೌಡ, ನಿರ್ದೇಶಕರಾದ ಉಮಾಪತಿ, ಅರಿಶಿಣಗುಂಡಿ ನಾಗರಾಜ್, ಬಿಸ್ತುವಳ್ಳಿ ನಾಗರಾಜ್, ರಸ್ತೆಮಾಕುಂಟೆ ಕವಿತಾ ಸ್ವಾಮಿ, ಗುತ್ತಿದುರ್ಗ ಬಸವನಗೌಡ ಸೇರಿದಂತೆ ಎಫ್ಪಿಓ ವ್ಯಾಪ್ತಿಗೆ ಒಳಪಡುವ ಅನೇಕ ರೈತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.