ಸುದ್ದಿವಿಜಯ, ಮಾಯಕೊಂಡ: ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಒಂಟಿಹಾಳ್ ಗ್ರಾಮದಲ್ಲಿ ವಿಷ ಆಹಾರ ಸೇವನೆಯಿಂದ ಶನಿವಾರ 35 ಕುರಿಗಳು ಬಲಿಯಾಗಿವೆ ಎಂದು ತಿಳಿದು ಬಂದಿವೆ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಪರಶುರಾಮ ಪುರ ಹೋಬಳಿಯ ವೃಂದವಳ್ಳಿ ಗ್ರಾಮದ ಕುರಿಗಾಯಿಗಳು ಒಂದು ಸಾವಿರ ಕುರಿಗಳ ಜೊತೆ ಆಹಾರಕ್ಕಾಗಿ ಮಾಯಕೊಂಡ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದರು.
ಎಂದಿನಂತೆ ಶನಿವಾರ ಮೇಯಿಸಿಕೊಂಡು ಬಂದು ಹೊಲವೊಂದರಲ್ಲಿ ಹಾಳಾಗಿದ್ದ ಅಲಸಂದೆ ಬಳ್ಳಿಯಲ್ಲಿ ಕುರಿಗಳನ್ನು ಕೂಡಿ ಮೇಯಿಸಿದ ನಂತರ ಕ್ಷಣದಲ್ಲೇ 35 ಕುರಿಗಳು ಅಸ್ವಸ್ಥವಾಗಿ ನೆಲಕ್ಕೆ ಉರುಳಿದವು. ತಕ್ಷಣ ಕುರಿಗಾಯಿಗಳು ಪರೀಕ್ಷಿಸಿದಾಗ ಅನೇಕ ಕುರಿಗಳು ಸಾವನ್ನಪ್ಪಿರುವುದು ಕಂಡು ಬಂತು ಎಂದು ಕುರಿಗಾಯಿ ಸಂದೀಪ್ ತಿಳಿಸಿದ್ದಾರೆ.
ವಿಷ ಆಹಾರ ಸೇವನೆಯಿಂದ ಹೊಟ್ಟೆ ಉಬ್ಬರವಾಗಿ ಕುರಿಗಳು ಬಲಿಯಾಗಿವೆ. ಲಕ್ಷ್ಮೀಕಾಂತ್ ಅವರ 7, ಈರಣ್ಣನ 8 ಮತ್ತು ಮಂಜಪ್ಪನ 15 ಕುರಿಗಳು ಸಾವನ್ನಪ್ಪಿದ್ದು ಪಶುವೈದ್ಯ ಪರೀಕ್ಷಕರು ಭೇಟಿ ನೀಡಿ ಪರೀಕ್ಷೆ ಮಾಡಿ ಅನೇಕ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ನಾಳೆ ಮರೋಣತ್ತರ ಪರೀಕ್ಷೆ ನಡೆಯಲಿದ್ದು ಸಾವಿಗೆ ಕಾರಣ ತಿಳಿದು ಬರಲಿದೆ.