ಸುದ್ದಿವಿಜಯ, ಜಗಳೂರು: ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಳಲ್ಲಿ ಒಬ್ಬರಾಗಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸೋಮವಾರ ಕ್ಷೇತ್ರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ನೆರವೇರಿಸಿದರು.
ಕಾಂಗೆಸ್ನ ಮೂರನೇ ಪಟ್ಟಿಯಲ್ಲಿ ಜಗಳೂರು ಕ್ಷೇತ್ರದ ಟಿಕೆಟ್ ಘೋಷಣೆಯಲ್ಲಿ ತಮ್ಮ ಹೆಸರು ನಿರೀಕ್ಷೆಯಲ್ಲಿರುವ ಅವರು ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಅಭಿಮಾನಿಗಳೊಂದಿಗೆ ಬಿದರಕೆರೆಯಿಂದ ಕೊಣಚಗಲ್ ರಂಗನಾಥ ಸ್ವಾಮಿ
ದೇವಾಲಯ, ಕೊಡಗುಡ್ಡದ ವೀರಭದ್ರಸ್ವಾಮಿ ದೇವಾಲಯ, ಜಗಳೂರು ಪಟ್ಟಣದ ಈಶ್ವರ ದೇವಾಲಯ ಮತ್ತು ಮಾರಿಕಾಂಬಾ ದೇವಿ ದೇವಸ್ಥಾನ, ಕಲ್ಲೇದೇವರಪುರದ ಕಲ್ಲೇಶ್ವರ ಸ್ವಾಮಿ ದೇವಾಲಯ, ಮುಸ್ಟೂರೇಶ್ವರ ದೇವಾಲಯ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯ ಸೇರಿದಂತೆ ವಿವಿಧ ಗ್ರಾಮಗಳ ದೇವಸ್ಥಾನಗಳಿಗೆ ತೆರಳಿ ಪೂಜೆ ನೆರವೇರಿಸಿದರು.
ಇದೇ ವೇಳೆ ಜಗಳೂರು ಪಟ್ಟಣದ ಈಶ್ವರ ದೇವಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇನ್ನೂ ಪಕ್ಷ ಯಾರಿಗೆ ಟಿಕೆಟ್ ಎಂದು ನಿರ್ಧಾರ ಮಾಡಿಲ್ಲ. ಕಳೆದ 12 ವರ್ಷಗಳಿಂದ ಪಕ್ಷದಲ್ಲಿ ದುಡಿಯುತ್ತಿದ್ದೇವೆ. ಟಿಕೆಟ್ ನಿರೀಕ್ಷೆಯ ಆಶಾಭಾವನೆಯಲ್ಲಿದ್ದೇವೆ.
ವರಿಷ್ಠರ ಅಣತಿಯಂತೆ ನಡೆಯುತ್ತಿದ್ದೇವೆ. ಎಲ್ಲರ ಉಪಸ್ಥಿತರಿಯಲ್ಲಿ ಪೂಜೆ ಮಾಡಿಸುತ್ತಿದ್ದೇವೆ. ಪಕ್ಷದ ಗೆಲುವಿಗಾಗಿ ಎಲ್ಲ ಅಭಿಮಾನಗಳ ಒತ್ತಾಯಕ್ಕೆ ಪೂಜೆ ಮಾಡಿಸುತ್ತಿದ್ದೇವೆ. ಟಿಕೆಟ್ ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ.
ಒಂದು ವೇಳೆ ನಿಮಗೆ ಟಿಕೆಟ್ ಕೈ ತಪ್ಪಿದರೆ ನಿಮ್ಮ ಮುಂದಿನ ನಿರ್ಧಾರ ಏನು ಎನ್ನುವ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಮುಂದಿನ ನಿರ್ಧಾರವನ್ನು ಬೆಂಬಲಿಗರ ಸಭೆ ನಡೆಸಿ ತೀರ್ಮಾಣ ಮಾಡುತ್ತೇವೆ ಎಂದರು.
ವರಿಷ್ಠರ ಮೇಲೆ ಭರವಸೆ ಇದೆ. ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಬಂಡಾಯ ಅಭ್ಯರ್ಥಿಯಾಗುತ್ತೀರಾ ಎಂದು ಕೇಳಿದ್ದಕ್ಕೆ ಮುಂದಿನ ನಮ್ಮ ನಡೆಯನ್ನು ಕಾರ್ಯಕರ್ತರ ಅಭಿಪ್ರಾಯದ ಮೇಲೆ ತೀರ್ಮಾಣ ಮಾಡುತ್ತೇವೆ ಎಂದರು.
ಈ ವೇಳೆ ಕೆಪಿಸಿಸಿ ಜಗಳೂರು ಉಸ್ತುವಾರಿ ಕಲ್ಲೇಶ್ರಾಜ್ ಪಾಟೀಲ್ ಸೇರಿದಂತೆ ರಾಜೇಶ್ ಅವರು ನೂರಾರು ಅಭಿಮಾನಿಗಳು, ಕಾರ್ಯಕರ್ತರು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಜೊತೆಯಲ್ಲಿದ್ದರು.