ಪ.ಪಂ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ಸ್ಪೋಟ!

Suddivijaya
Suddivijaya June 28, 2022
Updated 2022/06/28 at 1:56 AM

ಸುದ್ದಿವಿಜಯ,ಜಗಳೂರು:ಶುದ್ಧ ಕುಡಿಯುವ ನೀರಿಲ್ಲ, ವಿದ್ಯುತ್ ಇಲ್ಲ, ಚರಂಡಿ ವ್ಯವಸ್ಥೆ ಸರಿಯಿಲ್ಲ. ರಸ್ತೆಗಳು ಹಾಳಾಗಿವೆ, ಶೌಚಾಲಯ ವ್ಯವಸ್ಥೆ ಸರಿಯಿಲ್ಲ, ಆರ್‍ಓ ಪ್ಲಾಂಟ್‍ಗಳು ಕೆಟ್ಟು ಹೋಗಿವೆ, ಸಿಬ್ಬಂದಿ ಕೊರತೆಯಿದೆ ಹೀಗೆ ಸಾಲು ಸಾಲು ಸಮಸ್ಯೆಗಳ ಬಗ್ಗೆ ಜಗಳೂರು ಪಪಂ ಸದಸ್ಯರು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ಹೊರ ಹಾಕಿದರು…

ಶಾಸಕ ಎಸ್.ವಿ.ರಾಮಚಂದ್ರ ಬರುವುದಕ್ಕೂ ಮೊದಲು ಸದಸ್ಯ ರಮೇಶ್ ಮಾತನಾಡಿ, ಪಟ್ಟಣದಲ್ಲಿ ಸರಿಯಾದ ಪಾರ್ಕಿಂಗ್ ಇಲ್ಲ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿದೆ. ಚರಂಡಿ ಕಾಮಗಾರಿಗಳಾಗಿಲ್ಲ. ಶಾಂತಿಸಾಗರದಿಂದ ನೀರು ಬರುತ್ತಿಲ್ಲ ಜನರಿಗೆ ಉತ್ತರಕೊಡಲು ನನ್ನಿಂದ ಆಗುತ್ತಿಲ್ಲ ರಾಜೀನಾಮೆ ನೀಡುತ್ತೇನೆ ಎಂದುರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರಾದ ಎಸ್.ಸಿದ್ದಪ್ಪ. ಪ್ರತಿಯೊಂದು ವಾರ್ಡ್‍ಗಳಲ್ಲಿ ಏನು ಬೇಕು ಎಂಬುದರ ಪಟ್ಟಿಮಾಡಿ ನಮಗೆ ತಿಳಿಸಿ ಎಂದು ಎಂಜಿನಿಯರ್ ಅವರಿಗೆ ಸೂಚಿಸಿದರು.

ಸದಸ್ಯ ಬಿ.ಟಿ.ರವಿ ಮಾತನಾಡಿ, ಪ್ರತಿ ಸಾಮಾನ್ಯ ಸಭೆಯಲ್ಲೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತವೆ ಆದರೆ ಅವುಗಳ ಅನಷ್ಠಾನ ಸಾಧ್ಯವಾಗುತ್ತಿಲ್ಲ ಎಂದರು. ಶಾಂತಿ ಸಾಗರದಿಂದ ಪಟ್ಟಣದ ಜನತೆಗೆ ನೀರು ಬರುತ್ತಿಲ್ಲ ಜನ ನೀರು ನೀರು ಅನ್ನುತ್ತಿದ್ದಾರೆ ಎಂದರು. ಅದಕ್ಕೆ ಅಧ್ಯಕ್ಷ ಸಿದ್ದಪ್ಪ ಅವರು ಒಂದು ವಾರದಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸಿ ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಶಾಸಕ ಎಸ್.ವಿ.ರಾಮಚಂದ್ರ ಸಭೆಗೆ ಬರುತ್ತಿದ್ದಂತೆ ಪ್ರತಿ ವಾರ್ಡ್‍ಗಳ ಸಮಸ್ಯೆಗಳನ್ನು ಗಂಭೀರವಾಗಿ ಆಲಿಸಿದರು. ಸದಸ್ಯ ಎಂಎಲ್‍ಎ ತಿಪ್ಪೇಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಯುಜಿಡಿ ವ್ಯವಸ್ಥೆಯೇ ಇಲ್ಲ. ಎಲ್ಲಿ ನೋಡಿದರೂ ನೀರು ಹರಿದು ಬರುತ್ತದೆ. ಮಳೆ ಬಂದರೆ ಜನ ಓಡಾಡುವುದೇ ಕಷ್ಟವಾಗುತ್ತದೆ ಎಂದು ಪತ್ರಿಕೆಯ ಸುದಿಯನ್ನು ತೋರಿಸಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸರು ಪಟ್ಟದಲ್ಲಿ ಯುಜಿಡಿ ಕಾಮಗಾರಿಗೆ ಕನಿಷ್ಟ 150 ಕೋಟಿ ಹಣವಾದರೂ ಬೇಕು. ಈಗ ಕಾಮಗಾರಿ ಕೈಗೆತ್ತಿಕೊಂಡರೆ ಕನಿಷ್ಠ ಒಂದೂವರೆ ವರ್ಷವಾದರೂ ಸಮಯ ಬೇಕು. ರಸ್ತೆಗಳನ್ನು ಕಿತ್ತು ಯುಜಿಡಿ ಮಾಡಿಸಿದರೆ ಅದಕ್ಕೆ ಟಾರ್ ಹಾಕಲು ಸಾಕಷ್ಟು ಹಣ ಸಮಯ ಬೇಕಾಗುತ್ತದೆ. ಚುನಾವಣೆಯ ನಂತರ ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗಳನ್ನು ಕೈಗೊತ್ತಿಕೊಳ್ಳುತ್ತೇವೆ ಎಂದು ಭವವಸೆ ನೀಡಿದರು.

ಮಹಿಳಾ ಸದಸ್ಯರಾದ ಲಲಿತಾ ಮಾತನಾಡಿ, ದೇವೇಗೌಡ ಬಡವಾಣೆಯ ಅಶ್ವಿನಿ ಬಡಾವಣೆಯಲ್ಲಿ ಸೇತುವೆ ಕಿತ್ತು ವರ್ಷಗಳೇ ಆಗಿದ್ದು ಓಡಾಡಲು ಆಗುತ್ತಿಲ್ಲ. ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದರು. ಆಗ ಶಾಸಕರು ಕಾಮಗಾರಿ ನಡೆಸಲು ಗುತ್ತಿಗೆ ನೀಡಲಾಗಿದೆ ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದರು.

ಸದಸ್ಯರಾದ ಲುಕ್ಮಾನ್ ಉಲ್ಲಾಖಾನ್, ಆಸ್ಪತ್ರೆ ಬಳಿಯ ಹೈ ಮಾಸ್ಟ್‌ ಲೈಟ್‌ ಆಫ್‌ ಬಗ್ಗೆ ಸಭೆಯಲ್ಲಿ ಗಮನ ಸೆಳೆದರು. ಸದಸ್ಯ ಎಂಎಲ್‍ಎ ತಿಪ್ಪೇಸ್ವಾಮಿ, ಪಟ್ಟಣದಲ್ಲಿ 57 ಲಕ್ಷ ನೀರಿನ ಬಿಲ್ ಬಾಕಿ ಇದೆ ಏನು ಮಾಡಬೇಕು ಎಂದು ಸಭೆಯಲ್ಲಿ ಸದಸ್ಯರ ಗಮನ ಸೆಳೆದರು. ಶಾಸಕರು ಇದಕ್ಕೆ ಹಂತ ಹಂತವಾಗಿ ಸಾರ್ವಜನಿಕರಿಂದ ಬಿಲ್‍ಕಟ್ಟಿಸಿಕೊಳ್ಳಿ ಎಂದರು.

ಸಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ ಎಸ್.ಸಿದ್ದಪ್ಪ, ಉಪಾಧ್ಯಕ್ಷರಾದ ಬಿ.ಮಂಜಮ್ಮ, ಜಿ.ಬಿ.ಲೋಕಮ್ಮ, ಟಿ.ಲಲಿತಾ, ನಿರ್ಮಲಾಕುಮಾರಿ, ಬಿ.ಸರೋಜಾ, ದೇವರಾಜ್, ನವೀನ್‍ಕುಮಾರ್, ಜೆ.ಪಾಲಲಿಂಗಪ್ಪ, ಜೆ.ಎಸ್ ಗಿರೀಶ್, ಹಜರತ್ ಉನ್ನಿಸಾ, ಬಿ.ಪಿ.ಸುಭಾನ್ ಸಾಬ್, ಷಕೀಲ್ ಅಹ್ಮದ್, ಅರಿಶಿಣಗುಂಡಿ ಮಂಜುನಾಥ್ ಮತ್ತು ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಉಪಸ್ಥಿತರಿದ್ದರು.

ಹೊಸ ಆಸ್ಪತ್ರೆಗೆ ಜಾಗ ಎಲ್ಲಿದೆ?

ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರದಿಂದ ಹಣ ಮಂಜೂರಾಗಿದೆ. ಆದರೆ ಜಾಗದ ಕೊರತೆ ಇದೆ. ಹೇಗಾದರೂ ಮಾಡಿ ಆಸ್ಪತ್ರೆಯ ಜಾಗದ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳೆ ಪ್ರಸ್ತಾವನೆ ಸಲ್ಲಿಸಲು ಸದಸ್ಯರು ತೀರ್ಮಾನ ಮಾಡಬೇಕು ಎಂದರು. ಆಗ ಬಹುತೇಕ ಸದಸ್ಯರು ಹಳೆಯ ತಾಲೂಕು ಕಚೇರಿ ಜಾಗವಿದ್ದು ಆ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಎಪಿಎಂಸಿ ಇಂದ ಕೋರ್ಟ್‍ವರೆಗೆ ಡಬಲ್ ರೋಡ್ ನಿರ್ಮಾಣಕ್ಕೆ ಎರಡು ಕೋಟಿ ಮಂಜೂರಾಗಿದೆ. ಪಟ್ಟಣದ ಮೂಲಸೌಕರ್ಯಗಳಿಗೆ ಹೆಚ್ಚು ಹಣ ನನ್ನ ಅವಧಿಯಲ್ಲೇ ಆಗಿದ್ದು ಎಂದು ಶಾಸಕರ ಎಸ್.ವಿ.ರಾಮಚಂದ್ರ ಹೇಳಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!