ಸುದ್ದಿವಿಜಯ, ಜಗಳೂರು: ಮೇ.10 ರಂದು ನಡೆಯಲಿರುವ ಚುನಾವಣೆಯಲ್ಲಿ ನಿಮ್ಮ ಅಮೂಲ್ಯವಾದ ಮತವನ್ನು ಯೋಗ್ಯವ್ಯಕ್ತಿಗೆ ಹಾಕಿ. ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಹೇಳಿದರು.
ಜಗಳೂರು ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿ ಭಾನುವಾರ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಮತ್ತು ತಾಪಂ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಗ್ಗೂಡಿಸಿಕೊಂಡ ಮೇಲೆ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು. ಇದರಿಂದ ವಂಚಿತರಾಗುವುದು ಆತ್ಮವಂಚನೆಗೆ ಸಮಾನವಾದ ಕೆಲಸ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ. ದೇಶದ ಪ್ರಗತಿಗೆ ಶ್ರಮಿಸಿ ಎಂದು ಹೇಳಿದರು.
ನಮ್ಮನ್ನಾಳುವ ಪ್ರಜೆಗಳು ಎಂಹವರಿರಬೇಕು? ಯಾರಿರಬೇಕು? ಎಂಬ ಆಯ್ಕೆ ಕೂಡ ನಮ್ಮ ಕೈಯಲ್ಲೇ ಇದೆ.ಹೀಗಿರುವಾಗ ಮತದಾನ ದಿನವನ್ನು ಮೋಜು ಮಸ್ತಿಗಾಗಿ ನೀಡುವಂತಹ ರಜೆ ಎಂದು ಭಾವಿಸದೇ ತಪ್ಪದೇ ಮತದಾನ ಮಾಡವಂತೆ ಮನವಿ ಮಾಡಿದರು.
ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾತನಾಡಿ, ಮತದಾನ ನಮ್ಮ ಸಂವಿಧಾನ ನಮಗೆ ನೀಡಿರುವ ಹಕ್ಕು, ಇದರ ಸಮರ್ಪಕ ಬಳಕೆ ಪ್ರಜಾಪ್ರಭುತ್ವಕ್ಕೆ ಕೊಟ್ಟ ಬಹುದೊಡ್ಡ ಗೌರವ. 18 ವರ್ಷ ತುಂಬಿದ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಆಮಿಷಗಳಿಗೆ ಒಳಗಾಗದೇ ಯೋಗ್ಯ ವ್ಯಕ್ತಿಗೆ ಮತನೀಡಿ ಎಂದರು.
ತಾಪಂ ಇಒ ಚಂದ್ರಶೇಖರ್ ಮಾತನಾಡಿದರು. ನಬಾಲಕೀಯರ ವಿದ್ಯಾರ್ಥಿನಿಲಯಗಳ ನೂರಾರು ವಿದ್ಯಾರ್ಥಿನಿಯರು ಘೋಷನೆ ಕೂಗಿ ಮತದಾನ ಜಾಗೃತಿ ಮೂಡಿಸಿದರು. ಹಾಸ್ಟೆಲ್ ಮೇಲ್ವಿಚಾರಕರಾದ ಮಂಗಳ ಕನವಳ್ಳಿ, ಮತ್ತು ಸಿಬ್ಬಂದಿವರ್ಗ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.