ಸುದ್ದಿವಿಜಯ, ಜಗಳೂರು: ಪಟ್ಟಣದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಜೀವನೋಪಾಯಕ್ಕೆ ಜವಾನರಾಗಿ ವೃತ್ತಿ ಆರಂಭಿಸಿದ ನೂತನ ಶಾಸಕರಾದ ಬಿ.ದೇವೇಂದ್ರಪ್ಪ ಕಷ್ಟಗಳನ್ನು ಹಾಸುಹೊದ್ದು ಮಲಗಿದವರು.
ಒಂದೊತ್ತಿನ ಊಟಕ್ಕೆ ಸಮಸ್ಯೆಯಿದ್ದ ಕಾಲದಲ್ಲಿ ಕೈ ಹಿಡಿದವರು ವಿದ್ಯಾರತ್ನ ಎಂದೇ ಹೆಸರಾದ ನಾಲಂದ ಕಾಲೇಜಿನ ಸಂಸ್ಥಾಪಕರಾದ ಟಿ.ತಿಪ್ಪೇಸ್ವಾಮಿ ಅವರು.
ಚಿಕ್ಕಮ್ಮನಹಟ್ಟಿ ಗ್ರಾಮದಿಂದ ಕರೆ ತಂದು ತಮ್ಮ ಕಾಲೇಜಿನಲ್ಲಿ ಜವಾನ ವೃತ್ತಿ ಕೊಟ್ಟರು. ಅವರ ಒಡನಾಡಿಯಾದ ದೇವೇಂದ್ರಪ್ಪ ಅವರು ಅಪಾರ ಜ್ಞಾನ ಸಂಪಾದಿಸಲು ಹಗಲು ಇರುಳು ಸಾಹಿತ್ಯ, ಕವಿತೆ, ಪುಸ್ತಕಗಳನ್ನು ಓದಿದರು.
ಅವರೇ ತಮ್ಮ ಸರ್ವಸ್ವ ಎಂದು ಭಾವಿಸಿದರು. ತಮ್ಮ ಇಬ್ಬರು ಮಕ್ಕಳಾದ ಕೀರ್ತಿಕುಮಾರ್, ವಿಜಯಕುಮಾರ್ ಅವರನ್ನು ಬಾಲ ಭಾರತಿ, ಅಮರಭಾರತಿ ಶಾಲೆಯಲ್ಲೇ ಓದಿದಸಿದರು.
ತಮ್ಮ ಹಿರಿಯ ಪುತ್ರ ಕೀರ್ತಿಕುಮಾರ್ ಸರಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ವಿಭಾಗದಲ್ಲಿ ಸರಕಾರಿ ನೌಕರಿ ದೊರೆಯಿತು. ಕಿರಿಯ ಪುತ್ರ ವಿಜಯ್ ಕುಮಾರ್ ಎಂಬಿಬಿಎಸ್ ಮುಗಿಸಿ ವೈದ್ಯರಾದರು.
ಅಷ್ಟಕ್ಕೇ ಸೀಮಿತವಾಗದೇ ಐಆರ್ ಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದಾಯ ತೆರಿಗೆ ಅಧಿಕಾರಿ ಆದ ಮೇಲೆ ದೇವೇಂದ್ರಪ್ಪ ಅವರ ಅದೃಷ್ಟ ಬದಲಾಯಿತು.
ಜವಾನ ವೃತ್ತಿಗೆ ರಾಜೀನಾಮೆ ನೀಡಿ ಕೊಂಚಕಾಲ ಸಮಾಜ ಸೇವೆಯಲ್ಲಿ ತಲ್ಲೀನರಾದರು. ಬಡತನದಿಂದ ಬಂದ ಅವರಿಗೆ ಬಡವರ ಬಗ್ಗೆ, ದೀನ ದಲಿತರ ಬಗ್ಗೆ ಕಾಳಜಿ ಹೊಂದಿದ್ದರು.
ರಾಜಕೀಯ ಕ್ಷೇತ್ರದಲ್ಲಿ ಉತ್ಕಟ ಅಭಿಲಾಷೆ ಹೊಂದಿದ್ದ ದೇವೇಂದ್ರಪ್ಪ ಅವರಿಗೆ 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ 13 ಸಾವಿರ ಮತ ಗಳಿಸಿದ್ದರು.
ಛಲಬಿಡದ ತ್ರಿವಿಕ್ರಮ ನಂತೆ ತಮ್ಮ ರಾಜಕೀಯ ಜೀವನದಲ್ಲಿ ಏನಾದರೂ ಸಮಾಜ ಸೇವೆ ಮಾಡುವ ಉದ್ದೇಶದಿಂದ ಕಳೆದ 2022ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಅವರಿಗೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು 874 ಮತಗಳ ಅಂತರದಿಂದ ತೀವ್ರ ಪೈಪೋಟಿಯ ಮಧ್ಯೆಯೂ ಗೆಲುವು ಸಾಧಿಸಿ. ಜವಾನ ವೃತ್ತಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ.