ಸುದ್ದಿವಿಜಯ, ಜಗಳೂರು: ಬಿರುಗಾಳಿ ಸಹಿತ ಭಾರಿ ಮಳೆಗೆ ದರೆಗುರುಳಿದ ಬಾಳೆ ಬೆಳೆ ವೀಕ್ಷಣೆಗೆ ಬೆಂಗಳೂರು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ವಿಶ್ವನಾಥ್, ತೋಟಗಾರಿಕೆ ಇಲಾಖೆ ಸಹಾಯಕ ಹಿರಿಯ ನಿರ್ದೇಶಕ (ಎಸ್ಡಿಎಚ್) ವೆಂಕಟೇಶ್ ಮೂರ್ತಿ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ವೆಂಕಟೇಶ್ ನಾಯ್ಕ್ ನೇತೃತ್ವದ ತಂಡ ತಾಲೂಕಿನ ಮಠದದ್ಯಾಮೇನಹಳ್ಳಿ ಗ್ರಾಮದ ಎಂ.ಪಿ.ತಿಪ್ಪೇಸ್ವಾಮಿ ಸೇರಿದಂತೆ ನಷ್ಟ ಅನುಭವಿಸುತ್ತಿರುವ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಅಧಿಕಾರಿಗಳಿಗೆ ರೈತ ಎಂ.ಪಿ.ತಿಪ್ಪೇಸ್ವಾಮಿ ಮಳೆಯಿಂದ ಆದ ನಷ್ಟದ ಬಗ್ಗೆ ವಿವರಿಸಿದರು. ಕಷ್ಟ ಪಟ್ಟು ಬೆಳೆದ ಬಾಳೆ ಬಿರುಗಾಳಿಗೆ ತರಗೆಲೆಯಂತೆ ಅಪ್ಪಳಿಸಿದೆ. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆಸಲಾಗಿತ್ತು. ಆದರೆ ಅಕಾಲಿಕ ಮಳೆಯಿಂದ ಆದ ನಷ್ಟ ಹೇಳತೀರದಾಗಿದೆ. ದಯಮಾಡಿ ಇಲಾಖೆ ಅಧಿಕಾರಿಗಳು ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಜಂಟಿ ನಿರ್ದೇಶಕ ಡಾ.ವಿಶ್ವನಾಥ್ ಮಾತನಾಡಿ, ಕ್ಷೇತ್ರದಲ್ಲಿ ಆಗಿರುವ ನಷ್ಟದ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ರೈತರಿಗೆ ಆದ ನಷ್ಟದ ವರದಿ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿ ಸಾಧ್ಯವಾದಷ್ಟು ಬೇಗ ರೈತರ ಅಕೌಂಟ್ಗಳಿಗೆ ಬೆಳೆ ನಷ್ಟ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸೊಕ್ಕೆ, ಗುರುಸಿದ್ದಾಪುರ, ಮಲೆ ಮಾಚಿಕೆರೆ ಗ್ರಾಮಗಳಲ್ಲಿ ಮಳೆಯಿಂದ ಆದ ನಷ್ಟದ ಬಗ್ಗೆ ಮಾಹಿತಿ ಪಡೆಯಲು ತೋಟಗಾರಿಕೆ ಅಧಿಕಾರಿಗಳು ತೆರಳಿ ರೈತರಿಂದ ಮಾಹಿತಿ ಪಡೆದರು.