ಸುದ್ದಿವಿಜಯ, ಜಗಳೂರು: ಇನ್ನೊಂದು ವಾರದಲ್ಲಿ ಮುಂಗಾರು ಮಳೆ ರಾಜ್ಯ ಪ್ರವೇಶಿಸಲಿದ್ದು ರೈತರಿಗೆ ಬೇಕಾಗುವ ಬಿತ್ತನೆ ಬೀಜ ಮತ್ತು ಗೊಬ್ಬರಳು ರೈತರಿಗೆ ಸಕಾಲಕ್ಕೆ ಸಿಗುವಂತೆ ಮಾಡಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಸೂಚನೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ 2023-24ನೇ ಸಾಲಿನ ಮುಂಗಾರು ಬಿತ್ತನೆ ಬೀಜಗಳ ವಿತರಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ತಡವಾಗಿ ಮಳೆ ರಾಜ್ಯ ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಕೊರತೆಯಾಗದಂತೆ ನೋಡಿಕೊಳ್ಳಲು ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಮಳೆ ಬಂದರೆ ಸಾಕು ಬಿತ್ತನೆ ಮಾಡಲು ರೈತರು ಭೂಮಿಯನ್ನು ಸಿದ್ದತೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯವಹಿಸದೇ ಕಟ್ಟೆಚ್ಚರ ವಹಿಸಬೇಕು.
ಮಧ್ಯವರ್ತಿಗಳು ಹಾವಳಿಯಿಂದ ಕಳಪೆ ಬಿತ್ತನೆ ಬೀಜ ವಿತರಣೆಯಾಗಿ ರೈತರಿಗೆ ನಷ್ಟವಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ.ಸಂತೋಷ್ಕುಮಾರ್, ಉಪಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ಎಡಿಎ ಮಿಥುನ್ ಕಿಮಾವತ್, ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ,
ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಕೃಷಿ ಅಧಿಕಾರಿಗಳಾದ ಬೀರಪ್ಪ, ಗಿರೀಶ್ ಸೇರಿದಂತೆ ಅನೇಕರು ಇದ್ದರು.
ರೈತರು ಏನು ದಾಖಲೆಗಳನ್ನು ತರಬೇಕು?
ಬಿತ್ತನೆ ಬೀಜ ವಿತರಣಾ ಕೇಂದ್ರದಲ್ಲಿ ಮೆಕ್ಕೆಜೋಳ, ರಾಗಿ, ಜೋಳ, ಭತ್ತ, ತೊಗರಿ, ಸೋಯಾಬೀನ್,ಹೆಸರು, ಅಲಸಂದೆ, ಸಜ್ಜೆ, ಸೂರ್ಯಕಾಂತಿ, ನವಣೆ ಮತ್ತು ಸಿರಿಧಾನ್ಯಗಳು ಬಿತ್ತನೆಗೆ ಲಭ್ಯವಿದೆ. ಕಡ್ಡಾಯವಾಗಿ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣೆಯಾಗಿರಬೇಕು. ಆಧಾರ್ ಕಾರ್ಡ್, ರೈತರು ಕಡ್ಡಾಯವಾಗಿ ಪಿಎಂ ಕಿಸಾನ್ಗೆ ಇ-ಕೆವೈಸಿ ಮಾಡಿಸಿ ಬಿತ್ತನೆ ಬೀಜ ಪಡೆಬೇಕು ಎಂದು ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ತಿಳಿಸಿದ್ದಾರೆ.
ಬಿತ್ತನೆ ಬೀಜ ವಿತರಣಾ ಕೇಂದ್ರಗಳು
ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ, ಸೊಕ್ಕೆ, ಬಿಳಿಚೋಡು, ಹೊಸಕೆರೆ, ಪಲ್ಲಾಗಟ್ಟೆ ಎಫ್ಪಿಒ, ಜಗಳೂರು ಎಪಿಎಂಸಿ ಆವರಣದಲ್ಲಿ ಬಿತ್ತನೆ ಬೀಗಳನ್ನು ಕೃಷಿ ಇಲಾಖೆಯವತಿಯಿಂದ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.