ಸುದ್ದಿವಿಜಯ, ಜಗಳೂರು: ಇಡೀ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.40ರಷ್ಟು ಮಳೆ ಕೊರತೆಯಾಗಿದ್ದರೂ ಸಹ ಜಿಲ್ಲೆಯಾದ್ಯಂತ ಯಾವ ತಾಲೂಕಿನಲ್ಲೂ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಪ್ರತಿ ತಿಂಗಳು ಮಂಗಳವಾರ ತಾಲೂಕು ಕಚೇರಿ ಭೇಟಿ ನಿಮಿತ್ತ ಆಗಮಸಿದ ಅವರು, ಕಚೇರಿಯಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ¸ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ನ್ಯಾಮತಿ ಬಳಿಯಿರುವ ಜಾಕ್ವೆಲ್ನಲ್ಲಿ ಮರಳಿನ ಬದು ನಿರ್ಮಾಣ ಮಾಡಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ಮೇವಿನ ಕೊರತೆಯಿಲ್ಲ. ಕಳೆದ ವರ್ಷ ಈ ಹೊತ್ತಿಗೆ ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿತ್ತು. ಕೆರೆಗಳಲ್ಲೂ ಸಾಕಷ್ಟು ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಕಾರಣ ಬಿಪರ್ಜಾಯ್ ಚಂಡಮಾರುತ ಎಂದರು.
ದೇಶದಾದ್ಯಂತ ಮಳೆಯ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಕಡಿಮೆ ಅವಧಿಯ ಬೆಳೆಗಳನ್ನು ಬೆಳೆಯಲು ಯಾವ ತಳಿ ಸೂಕ್ತ ಎಂಬುದನ್ನು ನಿರ್ಧರಿಸಲು ಕೃಷಿ ಸಂಶೋಧಕರು, ವಿಜ್ಞಾನಿಗಳ ಜೊತೆ ಸಭೆ ನಡೆಸುತ್ತೇವೆ ಎಂದರು.
ಜಿಲ್ಲೆಯಾದ್ಯಂತ ವಾರ್ಷಿಕ 42 ಮೆಟ್ರಿಕ್ ಟನ್ ಗೊಬ್ಬರ ಬೇಕು. ಆದರೆ ಈ ಬಾರಿ 43 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಾಗಿದೆ. ಅಲ್ಲದೇ ಬಿತ್ತನೆ ಬೀಜಗಳಿಗೆ ಯಾವುದೇ ತೊಂದರೆಯಾಗಿಲ. ಮಳೆ ಕೊರತೆಯಿಂದ ಕೆರೆಗಳ ಸ್ಥಿತಿ ಪರಿಶೀಲಸಲು ಎಲ್ಲ ತಾಲೂಕುಗಳ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ಮಳೆ ಕೊರತೆ ಉಂಟಾದರೆ ಮೋಡ ಬಿತ್ತನೆ ಚಿಂತನೆ ಮಾಡಲು ಸರಕಾರಕ್ಕೆ ಶಿಫಾರಸ್ಸು ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಈಗ ಸದ್ಯಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ತಿಳಿಸಿದ್ದಾರೆ ಎಂದರು.
ಶೀಘ್ರವೇ 57 ಕೆರೆ ಕಾಮಗಾರಿ ಮುಕ್ತಾಯ!
ಜಗಳೂರು ಕ್ಷೇತ್ರದ 57 ಕೆರೆ ತುಂಬಿಸುವ ಏತ ಕಾಮಗಾರಿ ಮುಕ್ತಾಯವಾಗಲಿದೆ. ಇನ್ನು 25 ಕಿ.ಮೀ ಕಾಮಗಾರಿ ಪ್ರಗತಿಯಿದ್ದು, ಡಿಸೆಂಬರ್ ಒಳಗೆ ಮುಕ್ತಾಯವಾಗಲಿದೆ. ಮುಂದಿನ ಮಳೆಗಾಲಕ್ಕೆ ಎಲ್ಲ ಕೆರೆಗಳಿಗೆ ನೀರು ಹರಿಯಲಿದೆ ಎಂದರು.
ಮಾನವ ಮತ್ತು ಪ್ರಾಣಿಗಳ ಸಂಘರ್ಷ ಎಲ್ಲ ಕಡೆಯಿದೆ. ತಾಲೂಕಿನಲ್ಲಿ ಕರಡಿ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಎಲ್ಲ ಆಯಾಮಗಳಿದಂದ ನೋಡಬೇಕಿದೆ. ಸೋಲಾರ್ ಬೇಲಿ ಹಾಕಬೇಕೋ ಬೇಡವೋ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯಿಲ್ಲದೇ ಪರಿತಪಿಸುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಅವರನ್ನು ಕರೆದು ಬಿಇಓ ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ. ಎಲ್ಲೆಲ್ಲಿ ಸರಕಾರಿ ಸಾರಿಗೆ ಕೊರತೆಯಿದೆಯೋ ಅಲ್ಲಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದರು.
ಸಮಸ್ಯೆ ಬಗೆ ಹರಿಸುತ್ತೇವೆ :
ಶೇ.60ರಷ್ಟು ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ ಎಂಬ ಪ್ರಶ್ನೆಗೆ ಬೇಸರ ವ್ಯಕ್ತಪಡಿಸಿದ ಡಿಸಿ ಹೌದಾ, ಇಷ್ಟೊಂದು ಶಾಲೆಗಳಲ್ಲಿ ಶೌಚಾಲಯಗಳಿಲ್ಲವೇ ಬಿಇಓ ಎಂದು ಪ್ರಶ್ನಿಸಿದರು. ತಕ್ಷಣವೇ ಸಮಸ್ಯೆ ಬಗೆಹರಿಸಿಲು ಸಂಬಂಧಪಟ್ಟ ಇಲಾಖೆಗೆ ವರದಿ ನೀಡಿ ಎಂದರು. ಶಾಂತಿ ಸಾಗರದ ನೀರು ಪಟ್ಟಣಕ್ಕೆ ಬಾರದೇ ವರ್ಷಗಳಾಯಿತು ಎಂದು ಪತ್ರಕರ್ತರ ಪ್ರಶ್ನೆಗೆ ಅದು ಎರಡು ಜಿಲ್ಲೆಗಳಿಗೆ ಸಂಬಂಧಿಸಿದ ಯೋಜನೆಯಾಗಿದ್ದು ಶೀಘ್ರವೇ ಎರಡೂ ಜಿಲ್ಲಾಧಿಕಾರಿಗಳು ಕುಳಿತು ಸಮಸ್ಯೆ ಬಗೆ ಹರಿಸುತ್ತೇವೆ ಎಂದರು.
ಈ ವೇಳೆ ತಹಿಶೀಲ್ದಾರ್ ಜಿ.ಸಂತೋಷ್ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ತೋಟಗಾರಿಕೆ ಸಹಾಯಕ ನಿರ್ದೇದಶಕ ವೆಂಕಟೇಶ್ಮೂರ್ತಿ, ಕೃಷಿ ಅಧಿಕಾರಿ ಗಿರೀಶ್, ಬಿಒಪ ಸುರೇಶ್ರೆಡ್ಡಿ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಆಸ್ಮಾಭಾನು ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.