ಸುದ್ದಿವಿಜಯ,ಜಗಳೂರು: ಈ ನಾಡು ನುಡಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅನನ್ಯ. ಅವರ ದೂರ ದೃಷ್ಟಿಯ ಫಲವಾಗಿ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ್ ವ್ಯಾಲಿಯಾಗಿ ಬದಲಾಗಿದೆ ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಹೇಳಿದರು.
ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 260 ಕೆರೆಗಳನ್ನು ನಿರ್ಮಿಸಿದ್ದರು.
ಸುಮಾರು 560 ವರ್ಷಗಳ ಹಿಂದೆ ಬೆಂಗಳೂರು ನಿರ್ಮಿಸಿ ಎಲ್ಲಾ ಜನಾಂಗದವರಿಗೂ ಸಹ ಒಂದೊಂದು ಬೀದಿಗಳನ್ನು ನಿರ್ಮಿಸಿದ್ದರು. ಧೈವ ಭಕ್ತರಾಗಿದ್ದ ಅವರು 130 ದೇವಾಲಯಗಳನ್ನು ಕಟ್ಟಿಸಿದರು. ಕೆಂಪೇಗೌಡರು ಒಂದು ಊರು, ಜಾತಿಗೆ ಸೀಮಿತರಾಗಿರಲಿಲ್ಲವೆಂದರು.
ಅನೇಕ ನದಿಮೂಲಗಳು, ಕೆರೆ ನಿರ್ವಣಕ್ಕೆ ಅಗತ್ಯವಾದ ಕಣಿವೆ ಪ್ರದೇಶ, ನಗರ ನಿರ್ಮಾಣಕ್ಕೆ ಸಮತಟ್ಟಾದ ಭೂಪ್ರದೇಶ, ಸಾಕಷ್ಟು ಮಳೆ ಬೀಳುವ ಮತ್ತು ಹಿತಕರ ಹವಾಗುಣ ಹೊಂದಿದ್ದ ಪ್ರದೇಶದಲ್ಲಿ ಕೆಂಪೇಗೌಡರು ಬೆಂಗಳೂರು ರೂಪಿಸಿದರು. ಕೆಂಪೇಗೌಡರು ಬೇರೆಬೇರೆ ವೃತ್ತಿ, ಕಸುಬು, ವ್ಯಾಪಾರ ವಹಿವಾಟು ನಡೆಸುವ ಜನರು ವಾಸಿಸಲು ಯೋಗ್ಯವಾದ ಹಲವಾರು ಪೇಟೆ, ಉಪಪೇಟೆಗಳನ್ನು ನಿರ್ಮಿಸಿದರು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಪ.ಪಂ ಸದಸ್ಯರಾದ ರಮೇಶ್, ಮಂಜುನಾಥ್, ಶಕೀಲ್, ಮಹಮದ್, ಮಾಜಿ ಅಧ್ಯಕ್ಷ ಇಕ್ಬಾಲ್ ಖಾನ್, ಮಾಜಿ ಜಿ.ಪಂ ಸದಸ್ಯ ಸಿ. ಲಕ್ಷ್ಮಣ್, ಮುಖಂಡರಾದ ಕಾಂತರಾಜ್, ಬರ್ಕತ್ಅಲಿ, ಕಾಟಪ್ಪ, ನಿವೃತ್ತ ಶಿಕ್ಷಕ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರಿದ್ದರು.