ಜಗಳೂರು: ‘ಗೃಹಲಕ್ಷ್ಮಿ’ ಯೋಜನೆ ಮಧ್ಯ ವರ್ತಿಗಳಿಂದ ರಾತ್ರಿ ದಂಧೆ!

Suddivijaya
Suddivijaya July 26, 2023
Updated 2023/07/26 at 6:07 PM

ಸುದ್ದಿವಿಜಯ,ಜಗಳೂರು(ವಿಶೇಷ):ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಅರ್ಜಿ ಹಾಕಲು ಅಧಿಕೃತವಾಗಿ ಸರಕಾರವೇ ಪರವಾನಿಗೆ ಕೊಟ್ಟ ಕೇಂದ್ರಗಳು ಸೇರಿ ಪರಿವಾನಿಗೆ ಇಲ್ಲದವರು ಸಹ ಬೇರೆಯವರ ಲಾಗಿನ್, ಪಾಸ್‍ವರ್ಡ್ ಪಡೆದು ಹಣ ಕೇಳುತ್ತಿರುವ ಘಟನೆಗಳು ತಾಲ್ಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.

ಜಗಳೂರು ತಾಲೂಕಿನಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಹಾಕಲು ಮಳೆಯನ್ನೂ ಲೆಕ್ಕಿಸದೇ ಮಹಿಳೆಯರು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ ಕ್ಯೂ ನಿಂತರೂ ಉಚಿತ ಸೇವೆ ಮಾತ್ರ ಶೂನ್ಯ. ಸರ್ವರ್ ಸಮಸ್ಯೆ ನೆಪ ಹೇಳಿ ಹಣ ಕೊಟ್ಟರೆ ಸಲೀಸಾಗಿ ಅರ್ಜಿಗಳು ಭರ್ತಿಯಾಗುತ್ತಿರುವುದು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಹೆಸರೇಳಲು ಇಚ್ಛಿಸದ ಗ್ರಾಹಕರೊಬ್ಬರು ಆರೋಪ ಮಾಡಿದ್ದಾರೆ.

ಮಧ್ಯ ವರ್ತಿಗಳಿಂದ ರಾತ್ರಿ ದಂಧೆ!

ಕಳೆದ ಜುಲೈ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಗೃಹ ಲಕ್ಷ್ಮಿ ಯೋಜನೆಗೆ ವಿಧಾನ ಸೌಧದಲ್ಲಿ ಚಾಲನೆ ನೀಡಿದರು. ಸರಕಾರದಿಂದ ಪರವಾನಿಗೆ ಪಡೆದ ಗ್ರಾಮ ಸೆಂಟರ್‌ಗಳಿಗೆ ಸರಕಾರವೇ ಒಂದು ಅರ್ಜಿಗೆ 10.80 ರೂ ನೀಡುತ್ತಿದೆ.

ಅಲ್ಲದೇ ಯಾರಿಂದಲೂ ಹಣ ಪಡೆಯುವಂತಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಆದರೆ ಅರ್ಜಿ ಪೂರ್ಣಗೊಂಡ ಬಳಿಕ ಬರುವ ಮಂಜೂರಾತಿ ಪತ್ರಕ್ಕೆ ಲ್ಯಾಮಿನೇಷನ್ ನೆಪ ಹೇಳಿ 50 ರಿಂದ 100 ರೂಗಳನ್ನು ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ.

ಜಗಳೂರು ತಾಲ್ಲೂಕಿನ 22 ಗ್ರಾಪಂಗಳಲ್ಲಿ 11 ಗ್ರಾಮ ಓನ್ ಸೆಂಟರ್‌ ಗಳಿವೆ. ಅದರಲ್ಲಿ ಹನುಮಂತಾಪುರ, ದೇವಿಕೆರೆ, ಬಿಳಿಚೋಡು, ಪಲ್ಲಾಗಟ್ಟೆ, ಗುರುಸಿದ್ದಾಪುರ, ತೋರಣಗಟ್ಟೆ, ಬಸವನಕೋಟೆ, ಸೊಕ್ಕೆ, ಹಿರೇಮಲ್ಲನಹೊಳೆ ಗ್ರಾಮಗಳ ಗ್ರಾಮಓನ್ ಕೇಂದ್ರದಲ್ಲಿ ಇರುವ ಗ್ರಾಪಂ ಡಿಇಒಗಳು ಸರ್ವರ್ ಸಮಸ್ಯೆಯಿದೆ ಎಂದು ಹೇಳುವ ಮೂಲಕ ಜನರನ್ನು ಸತಾಯಿಸುತ್ತಾರೆ.

ನಂತರ ಸಂಜೆ ಸರ್ವರ್ ಬ್ಯೂಸಿ ಕಡಿಮೆಯಾದಾಗ ಹೇಳ್ತಿವಿ ಎಂದು ಅರ್ಜಿದಾರರಿಂದ ದಾಖಲೆಗಳನ್ನು ಪಡೆದು ರಾತ್ರಿ 8 ಗಂಟೆಯಿದ ಮಧ್ಯ ರಾತ್ರಿ 12 ಗಂಟೆಯವರೆಗೆ ಹಣ ಕೊಟ್ಟವರಿಗೆ ಮೊಬೈಲ್‍ನಲ್ಲಿ ದಾಖಲೆ ತರಿಸಿಕೊಂಡು ಅರ್ಜಿಗಳನ್ನು ಹಾಕುವ ಮೂಲಕ ಮಂಜೂರಾತಿ ಪತ್ರಕ್ಕೆ 100, 200 ರೂ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ.

ಪಟ್ಟಣದ ತಾಲೂಕು ಕಚೇರಿ ಮುಂದಿರುವ ಮೊಬೈಲ್ ಸೇವಾಕೇಂದ್ರದವರು ಬೇರೆಯವರಿಂದ ಲಾಗಿನ್, ಪಾಸ್‍ವರ್ಡ್ ಪಡೆದು ಅರ್ಜಿ ಹಾಕಿ ಗ್ರಾಹಕರಿಂದ ಹಣ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ.
ಪ್ರತಿಷ್ಠೆಯ ಕಾರಣಕ್ಕಾಗಿ ಸಾಲಿನಲ್ಲಿ ನಿಲ್ಲದವರು, ಸ್ಥಿತಿ ವಂತರು, ಅರ್ಜಿ ಹಾಕಲು ಹಣ ಕೊಟ್ಟು ರೂಡಿ ಮಾಡಿದ್ದರಿಂದ ಬಡವರಿಗೆ ಬರೆ ಬೀಳುವಂತಾಗಿದೆ.

ತಹಶೀಲಾರ್ ಜಿ.ಸಂತೋಷ್‍ಕುಮಾರ್, ತಾಪಂ ಇಒ ವೈ.ಎಚ್. ಚಂದ್ರಶೇಖರ್ ಅವರು ಅರ್ಜಿ ಹಾಕಲು ಪರವಾನಿಗೆ ಪಡೆದವರ ಜೊತೆ ಸಭೆ ನಡೆಸಿ ಹಣ ಪಡೆಯುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರೂ ಸಹ ತೆರೆಮರೆಯ ಹಿಂದೆ ಹಣದ ದಂಧೆ ಮಾತ್ರ ನಿಂತಿಲ್ಲ.

ಆಧಾರ್ ಲಿಂಕ್‍ಗೆ ಕ್ಯೂ:

ತಾಲ್ಲೂಕು ಕಚೇರಿಯ ಪಕ್ಕದಲ್ಲಿರುವ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್‍ಗೆ ಫೋನ್ ನಂಬರ್ ಲಿಂಕ್ ಮತ್ತು ತಿದ್ದುಪಡಿ ಮಾಡಿಸಲು, ವಿಳಾಸ ಬದಲಾವಣೆ, ಹೆಸರು ತಿದ್ದುಪಡಿಗಾಗಿ ನಿತ್ಯ ಬೆಳಿಗ್ಗೆ 4 ಗಂಟೆಯಿಂದ ಸುತ್ತ ಮುತ್ತಲ ಗ್ರಾಮದಿಂದ ಜನ ಬೈಕ್, ಕಾರುಗಳಲ್ಲಿ ಬಂದು ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯ ಕಂಡು ಬಂತು.

ಸೋನೆ ಮಳೆಯಲ್ಲೂ ಮಹಿಳೆಯರು ಕೊಡೆ ಹಿಡಿದು ತಮ್ಮ ಕಾರ್ಯಕ್ಕಾಗಿ ದಿನವಿಡೀ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಜಗಳೂರಿನಲ್ಲಿ ಆಧಾರ್ ತಿದ್ದುಪಡಿಗೆ ಇದ್ದ ನಾಲ್ಕು ಕೇಂದ್ರಗಳಾದ ಬಿಎಸ್‍ಎನ್‍ಎಲ್ ಕಚೇರಿ, ಎಸ್‍ಬಿಐ ಆಧಾರ್ ಸೇವಾ ಕೇಂದ್ರ ಮತ್ತು ಫೋಸ್ಟ್ ಆಫೀಸ್‍ನಲ್ಲಿ ಸೇವೆ ಲಭ್ಯವಿಲ್ಲದ ಕಾರಣ ತಾಲ್ಲೂಕು ಕಚೇರಿಯ ಆವರಣದಲ್ಲಿ ಇರುವ ಆಧಾರ್ ಸೇವಾ ಕೇಂದ್ರದ ಬಳಿ ಸರತಿ ಸಾಲು ದೊಡ್ಡ ಮಟ್ಟದಲ್ಲಿರುತ್ತದೆ. ಜೊತೆಗೆ ಆಧಾರ್ ತಿದ್ದುಪಡಿಗೆ ನಿಗದಿ ಪಡಿಸಿದ ಸರಕಾರಿ ಸೇವಾ ಶುಲ್ಕದ ಜೊತೆಗೆ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂದು ಕಾನನಕಟ್ಟೆ ಬಾಲಪ್ಪ ಎನ್ನುವ ವ್ಯಕ್ತಿ ಆರೋಪ ಮಾಡಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!