ಜಗಳೂರು: ಪಪಂ ಅಧಿಕಾರಿಗಳಿಗೆ ಕಣ್ಣು ಕಾಣ್ತಿಲ್ಲ, ಕಿವಿಗಳು ಕೇಳ್ತಿಲ್ಲ!

Suddivijaya
Suddivijaya December 28, 2022
Updated 2022/12/28 at 1:48 AM

ಸುದ್ದಿವಿಜಯ, ಜಗಳೂರು: ತಾಲೂಕು ಕಚೇರಿಯ ಮುಂದೆಯೇ ಕಟ್ಟಿಕೊಂಡಿರುವ ಚರಂಡಿಯಿಂದ ಗಬ್ಬುನಾಥ, ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ಪ್ಲಾಸ್ಟಿಕ್ ನಿಷೇಧವಿದ್ದರೂ ರಸ್ತೆಯ ತುಂಬಾ ಬ್ಯಾಗಡಿಗಳ ಝೇಂಕಾರ, ಪ್ರಮುಖ ರಸ್ತೆಯಲ್ಲಿ ಸೇತುವೆ ಶಿಥಿಲವಾಗಿ ಎರಡು ವರ್ಷಗಳಾದರೂ ತಿರುಗಿ ನೋಡದ ಪಪಂ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆ ಅಧಿಕಾರಿಗಳಿಗೆ, ಪ್ರಭುತ್ವಕ್ಕೆ ಕಣ್ಣು, ಕಿವಿ ಇಲ್ಲ!

ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಇರುವ ಜಗಳೂರು ಪಟ್ಟಣದ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾದ ಸ್ವಚ್ಛ ಭಾರತ್, ಶ್ರೇಷ್ಠ ಭಾರತ್ ಎಂಬ ಘೋಷ ವಾಖ್ಯಕ್ಕೆ ಅಪವಾದವೆಂಬಂತಿದೆ. ಅವೈಜ್ಞಾನಿಕ ಲೇಔಟ್‍ಗಳು. ಲೇಔಟ್‍ಗಳಲ್ಲಿ ನಿರ್ಮಾಣವಾಗಿರುವ ಅವೈಜ್ಞಾನಿಕ ಚರಂಡಿಗಳು.

ಅಶ್ವಿನಿಬಡಾವಣೆಯಲ್ಲಿ ಸೇತುವೆ ದುರಸ್ತಿಯಾಗದೇ ಪ್ರಾಣ ಕೈಲಿಡಿದು ಚಲಿಸುತ್ತಿರುವ ಟ್ರ್ಯಾಕ್ಟರ್
ಅಶ್ವಿನಿಬಡಾವಣೆಯಲ್ಲಿ ಸೇತುವೆ ದುರಸ್ತಿಯಾಗದೇ ಪ್ರಾಣ ಕೈಲಿಡಿದು ಚಲಿಸುತ್ತಿರುವ ಟ್ರ್ಯಾಕ್ಟರ್

ಗಲೀಜು ನೀರು ರಸ್ತೆಗೆ ಹರಿಯುತ್ತಿದ್ದರೂ ತಲೆ ಕಡೆಸಿಕೊಳ್ಳದ ಅಧಿಕಾರಿಗಳು. ಕೆಲ ಚರಂಡಿಗಳಿಂದ ನೀರು, ನೇರವಾಗಿ ಜಗಳೂರು ಕೆರೆ ಸೇರು ಮಲೀನಗೊಳಿಸುತ್ತಿದ್ದರೂ ಗಪ್‍ಚುಪ್ ಆಗಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು. ಸಂಜೆ ಆದರೆ ಸಾಕು ಪಟ್ಟಣದ ನಿವಾಸಿಗಳಿಗೆ ರಕ್ತ ಪರೀಕ್ಷೆಗೆ ಬರುವ ಸೊಳ್ಳೆಗಳು.

ಮಲೀನತೆಯಿಂದ ಮಲೆರಿಯಾ, ಡೇಂಗಿ, ಜ್ವರ, ಮೈ-ಕೈ ನೋವಿನಿಂದ ಬಳಲುತ್ತಿರುವ ಜನರು. ಹಸಿಕಸ ಒಣ ಕಸ ಒಟ್ಟಿಗೆ ತೆಗೆದುಕೊಂಡು ಚರಂಡಿ ಕೆರೆ ಅಂಗಳ ಸುರಿಯುತ್ತಿರುವ ಸ್ವಚ್ಛತಾ ಸಿಬ್ಬಂದಿ. ಇಷ್ಟೆಲ್ಲಾ ಗೊತ್ತಿದ್ದರೂ ಸ್ವಚ್ಛತೆಗೂ ನಮಗೂ ಸಂಬಂಧವೇ ಇಲ್ಲದೇ ತಮ್ಮ ಪಾಡಿಗೆ ತಾವು ಇರುವ ಪಪಂ ಚೀಫ್ ಆಫೀಸರ್, ಎಂಜಿನಿಯರ್, ಆರೋಗ್ಯ ಅಧಿಕಾರಿಗಳ ನಡೆಯಿಂದ ನಾಗರಿಕರು ಹೈರಾಣಾಗಿ ಹೋಗಿದ್ದಾರೆ.

ಜಗಳೂರು ಪಟ್ಟಣದ ತಾಲೂಕು ಕಚೇರಿ ಮುಂದೆ ಕಸ ಕಟ್ಟಿಕೊಂಡಿರುವ ಚರಂಡಿ
ಜಗಳೂರು ಪಟ್ಟಣದ ತಾಲೂಕು ಕಚೇರಿ ಮುಂದೆ ಕಸ ಕಟ್ಟಿಕೊಂಡಿರುವ ಚರಂಡಿ

ಅದ್ಯಾಕೋ ಏನು ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಗಳೂರು ಸಿಟಿ ಅದ್ವಾನವಾಗಿದೆ. ದೇವೇಗೌಡ ಬಡಾವಣೆಯಲ್ಲಿರುವ ಅಶ್ವಿನಿ ಬಡಾವಣೆಯ ಮುಖ್ಯರಸ್ತೆ ಸೇತುವೆ ಮುರಿದು ಬಿದ್ದು ಎರಡು ವರ್ಷಗಳಾದರೂ ಖ್ಯಾರೇ ಅನ್ನುತ್ತಿಲ್ಲ. ಹಿಂದೆ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರೂ ಅಧಿಕಾರಿಗಳು ಮಾತ್ರ ಸೊಪ್ಪು ಹಾಕಿಲ್ಲ ಎಂದು ಅಶ್ವಿನಿ ಬಡಾವಣೆಯ ನಿವಾಸಿ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ದೂರವಾಯ್ತು ಕಚೇರಿ:
ಮೊದಲು ಪಟ್ಟಣದ ಹೃದಯ ಭಾಗದಲ್ಲಿದ್ದ ಪಪಂ ಕಚೇರಿಯನ್ನು ದಾವಣಗೆರೆ ರಸ್ತೆಯ ಎಪಿಎಂಸಿ ಮಾರುಕಟ್ಟೆ ಸಮೀಪ ನೂತನ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕ ಸಂಪರ್ಕವನ್ನು ಕಳೆದುಕೊಂಡ ದ್ವೀಪದಂತಾಗಿದೆ. ಇದರಿಂದ ಅಧಿಕಾರಿಗಳಿಗೆ ಆಟ, ಸಾರ್ವಜನಿಕರಿಗೆ ಪ್ರಾಣ ಸಂಕಟವಾಗಿದೆ. ಹೆಚ್ಚು ಜನ ಬಾರದೇ ಇರುವ ಕಾರಣ ಅಧಿಕಾರಿಗಳು ಕೆಲಸ ಮಾಡದೇ ಮೈ ಮರೆತಿದ್ದಾರೆ. ಕಚೇರಿಗೆ ಹಾಜರ್, ಕೆಲಸಕ್ಕೆ ಚೆಕ್ಕರ್ ನಂತಾಗಿದೆ. ಬೆಳಿಗ್ಗೆ ಬಂದವರು ಮಧ್ಯಾಹ್ನ ನಾಪತ್ತೆಯಾಗುತ್ತಾರೆ. ಸಾರ್ವಜನಿಕ ಕಾರ್ಯಗಳಿಗೆ ನಾಗರಿಕರು ಓಡಾಡಿ ಓಡಾಡಿ ಸುಸ್ತಾಗಿ ಅವರ ಸಹವಾಸವೇ ಬೇಡ ಎನ್ನುವ ಸ್ಥಿತಿಗೆ ಬಂದಿದ್ದಾರೆ.

ಜೆಸಿಆರ್ ಬಡಾವಣೆಯಲ್ಲಿ ಚರಂಡಿ ನೀರು ಖಾಲಿ ಸೈಟ್‍ನಲ್ಲಿ ಸಂಗ್ರವಾಗಿರುವುದು.
ಜೆಸಿಆರ್ ಬಡಾವಣೆಯಲ್ಲಿ ಚರಂಡಿ ನೀರು ಖಾಲಿ ಸೈಟ್‍ನಲ್ಲಿ ಸಂಗ್ರವಾಗಿರುವುದು. 

ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ:
ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಿಟಿ ಕ್ಲೀನ್ ಇಲ್ಲದೇ ಲೇಔಟ್‍ಗಳು ಹಂದಿಗೂಡಿನಂತಾಗಿವೆ. ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಪಪಂ ಮುಖ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಜಾಲಿ ಗಿಡಗಳು ಎಲ್ಲೆಂದರಲ್ಲಿ ಬೆಳೆದಿವೆ. ಬಾಕ್ಸ್ ಚರಂಡಿಗಳು ಗಬ್ಬು ನಾರುತ್ತಿದ್ದರೂ ಖ್ಯಾರೆ ಅನ್ನದ ಅಧಿಕಾರಿಗಳಿಂದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ.


-ಎಚ್.ಪಿ.ರಾಜೇಶ್, ಮಾಜಿ ಶಾಸಕ

ಇದ್ದರೂ ಇಲ್ಲದಂತಿದ್ದಾರೆ:
ಸೊಳ್ಳೆಗಳ ಕಾಟದಿಂದ ಸಾಕಾಗಿ ಹೋಗಿದೆ. ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ. ಸ್ವಚ್ಛತೆ ಕಾಪಾಡಬೇಕಾದ ಪಪಂ ಅಧಿಕಾರಿಗಳು ಇದ್ದರೂ ಇಲ್ಲದಂತಿದ್ದಾರೆ. ಆಡಳಿತ ವ್ಯವಸ್ಥೆ ಇದೆಯೋ ಇಲ್ಲವೋ ಗೊತ್ತಿಲ್ಲ.
-ಹೆಸರೇಳದ ಹಿರಿಯ ನಾಗರೀಕರು.

ಅನುದಾನ ಕೊರತೆ-ಕಾರ್ಯಗಳು ವಿಳಂಬ
ಎಲ್ಲಾ ವಾರ್ಡ್‍ಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿದ್ದೇವೆ. ಆಯಾ ವಾರ್ಡ್‍ನ ಸದಸ್ಯರು ತಮ್ಮ ಸಮಸ್ಯೆಗಳ ಬಗ್ಗೆ ಕ್ರಿಯಾ ಯೋಜನೆ ಸೇರಿಸಿದರೆ ತುರ್ತು ಕಾರ್ಯಗಳನ್ನು ಬೇಗನೇ ಮುಗಿಸುತ್ತೇವೆ. ಅನುದಾನ ಕೊರತೆಯಿಂದ ಕಾರ್ಯಗಳು ವಿಳಂಬವಾಗುತ್ತಿದೆ. ಅನುದಾನ ಬಂದ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ.
-ವಿಶಾಲಾಕ್ಷಿ ಓಬಳೇಶ್, ಪಪಂ ಅಧ್ಯಕ್ಷರು, ಜಗಳೂರು

 

Share this Article
Leave a comment

Leave a Reply

Your email address will not be published. Required fields are marked *

error: Content is protected !!