ಸುದ್ದಿವಿಜಯ, ಜಗಳೂರು: ಮುಂಗಾರು ತಡವಾಗಿ ಬಂದ ಹಿನ್ನೆಲೆ ಮೆಕ್ಕೆಜೋಳವನ್ನು ತಡವಾಗಿ ಬಿತ್ತಿರುವ ಕಾರಣ ಲದ್ದಿ ಹುಳುಗಳ ಕಾಟ ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವ ಕಾರಣ ಮೋಹಕ ಬಲೆಗಳನ್ನು ಬಳಸಿದರೆ ಲದ್ದಿ ಹುಳುಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಲದ್ದಿ ಹುಳು ನಿರ್ವಹಣೆಗೆ ಮೋಹಕ ಬಲೆ ಬಳಸಿ ವಿಧಾನಗಳ ಕುರಿತು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ರೈತರಿಗೆ ಪ್ರಾತ್ಯಕ್ಷತೆಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ ಹೆಚ್ಚು ಸಹಕಾರಿಯಾಗಲಿದೆ.
ರೈತ ಬಾಂಧವರು ಸಮಗ್ರ ಕಳೆ ನಿರ್ವಹಣೆ ಪದ್ಧತಿ ಅನುಸರಿಸಿ ಹಾಗೂ ಲದ್ದಿ ಹುಳುವಿನ ನಿರ್ವಹಣೆಗೆ ಎಕರೆಗೆ ನಾಲ್ಕರಿಂದ ಐದರಂತೆ ಮೋಹಕ ಬಲೆಗಳನ್ನು ಅಳವಡಿಸುವುದರಿಂದ ಲದ್ದಿ ಹುಳುವಿನ ಬಾದೆಯನ್ನು ಕಡಿಮೆ ಮಾಡಬಹುದು.
ಕೀಟದ ಭಾದೆ ಹೆಚ್ಚಾದಲ್ಲಿ ಇಮಾಮ್ಯಾಕ್ಟಿನ್ ಬೆಂಜಮೇಟ್ 0.4 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು. ಮೋಹಕ ಬಲೆ ಅಳವಡಿಸುವುದನ್ನು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಯಿತು.
ತೊಗರಿಯಲ್ಲಿ ಎಲೆ ತಿನ್ನುವ ಕೀಟಗಳ ಬಾಧೆ ಬಾಧೆ ಕಂಡು ಬಂದಲ್ಲಿ ಕ್ಲೋರೋಪೆರಿಪಾಸ್ ಸಿಂಪರಣೆ ಮಾಡುವುದರಿಂದ ನಿರ್ವಹಣೆ ಮಾಡಬಹುದೆಂದು ಎಂದು ಕೆವಿಕೆ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಟಿ.ಜಿ.ಅವಿನಾಶ್ ತಿಳಿಸಿದರು.
ಮೆಕ್ಕೆಜೋಳದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ ನ್ಯಾನೋ ಯೂರಿಯಾ ಬಳಕೆಯಿಂದ ಆಗುವ ಉಪಯೋಗಗಳ ಕುರಿತು ಎಚ್.ಎಂ.ಸಣ್ಣಗೌಡರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎನ್.ಎಸ್.ಸೋಮನಗೌಡ, ಕರಿಬಸಪ್ಪ ಸೇರಿದಂತೆ ಅನೇಕರು ಇದ್ದರು.