ಸುದ್ದಿವಿಜಯ, ಜಗಳೂರು: ಅಡವಿರಾಮಜೋಗಿಹಳ್ಳಿಯಲ್ಲಿ ದಲಿತರ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಮತ್ತು ಜಾತಿ ನಿಂದನೆ ಖಂಡಿಸಿ ಹಾಗೂ ಚಿತ್ರದುರ್ಗದ ಕವಾಡಿಗರಹಟ್ಟಿ ಕಲುಷಿತ ನೀರಿನ ಪ್ರಕರಣವನ್ನು ಸಿಬಿಐ ಅಥವಾ ಸಿಓಡಿ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಬುಧವಾರ ಡಿಎಸ್ಎಸ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ದಸಂಸ ಸಂಚಾಲಕ ಸತೀಶ್ ಮಾತನಾಡಿ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕು ಅಡವಿರಾಮಜೋಗಿಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕವನ್ನು ಹಾಕಿದ್ದಕ್ಕೆ ವಿರೋಧಿಸಿ ಅದೇ ಗ್ರಾಮದ ಅನ್ಯ ಸಮುದಾಯದವರು ಒಟ್ಟಾಗಿ ಸೇರಿಕೊಂಡು ದಲಿತರ ಕೇರಿಗೆ ನುಗ್ಗಿ ಕಂಡ ಕಂಡವರ ಮೇಲೆ ಹಲ್ಲೆ ಮಾಡಿರುವುದು ಯಾವ ನ್ಯಾಯ?
ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಹೆಣ್ಣುಮಕ್ಕಳು,6 ಮಂದಿ ಪುರುಷರು ಹಲ್ಲೆಗೊಳಗಾಗಿದ್ದು, ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಏಕಾಏಕಿ ಗುಂಪುಗಳು ಅಲ್ಪ ಸಂಖ್ಯಾತರ ಮೇಲೆ ಈ ರೀತಿಯ ವರ್ತನೆ ಖಂಡನಿಯ. ಇದಕ್ಕೆ ಕಾರಣರಾದವನ್ನು ಕೂಡಲೇ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಭೂಮಿಯ ಮೇಲೆ ದಲಿತರಾಗಿ ಹುಟ್ಟಿರುವುದೇ ತಪ್ಪಾ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ವಿವಿಧ ಕಡೆ ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಿವೆ, ಅದನ್ನು ತಡೆಯುವ, ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿಲ್ಲವೆಂದು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಸಿ.ಎಂ ಹೊಳೆ ಮಾರುತಿ, ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಇತ್ತೀಚೆಗೆ ಕಲುಷಿತ ನೀರು ಸೇವನೆ ಘಟನೆಯಿಂದ ಏಳು ಜನರ ಪ್ರಾಣ ಕಳೆದುಕೊಂಡಿದ್ದಾರೆ. 17ನೇ ವಾಡ್ರ್ನಲ್ಲಿ ಕಲುಷಿತ, ವಿಷಪೂರಿತ ನೀರನ್ನು ನಗರಸಭೆಯವರೇ ಪೂರೈಸಿದ್ದಾರೆ.
ಈ ನೀರು ಕುಡಿದು ಗರ್ಭದಲ್ಲಿದ್ದ ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. 80ಕ್ಕೂಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 22 ಮಂದಿ ಐಸಿಯೂನಲ್ಲಿದ್ದಾರೆ. ಪರಿಶಿಷ್ಠರು ಮತ್ತು ಸವರ್ಣೀಯರ ನಡುವಿನ ಘರ್ಷಣೆಯ ವೈಷಮ್ಯವೇ ಈ ಘಟನೆಗೆ ಕಾರಣವಾಗಿದೆ.
ಆದ್ದರಿಂದ ಜಿಲ್ಲಾಡಳಿತವು ನಿರ್ಲಕ್ಷ ತೋರದೇ ಸಂಪೂರ್ಣವಾಗಿ ಮಾಹಿತಿ ಪಡೆದು ಪ್ರಕರಣವನ್ನು ಸಿಬಿಐ ಅಥವಾ ಸಿಓಡಿ ತನಿಖೆಗೆ ವಹಿಸಬೇಕು. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಹನುಮಂತಪ್ಪ, ಬೈರಾನಾಯಕನಹಳ್ಳಿ ಚೌಡಪ್ಪ, ಉಮೇಶ್, ಸಣ್ಣ ನಾಗಪ್ಪ, ಅಸಗೋಡು ಪರಶುರಾಮ, ಬಿ.ಆರ್ ರವಿಚಂದ್ರ, ಎಸ್. ರವಿ, ಗೌರಮ್ಮನಹಳ್ಳಿ ವೆಂಕಟೇಶ್, ಶಿವು ಸೇರಿದಂತೆ ಮತ್ತಿತರಿದ್ದರು