suddivijaya.com /14/08/2023
ಸುದ್ದಿವಿಜಯ, ಜಗಳೂರು: ಜನ್ಮ ನೀಡಿದ ತಾಯಿ ಮತ್ತು ನಮ್ಮ ಭಾರ ಹೊತ್ತಿರುವ ಭೂಮಿ ಇಬ್ಬರ ಋಣ ತೀರಿಸಲು ಸಾಧ್ಯವಿಲ್ಲವೆಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಾಯಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಹಮ್ಮಿಕೊಂಡಿದ್ದ ನನ್ನ ಮಣ್ಣು, ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರ ಪುರುಷ ಹಾಗೂ ಮಹಿಳೆಯರನ್ನು ಗೌರವಿಸುವ ಹಿನ್ನೆಲೆ ನನ್ನ ಮಣ್ಣು, ನನ್ನ ದೇಶ ಅಭಿಯಾನ ಪ್ರಾರಂಭವಾಗಿದೆ. ಇದು ದೇಶದಾಧ್ಯಂತ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.
ದೇಶದ ಭದ್ರತೆಯನ್ನು ಕಾಪಾಡಿ, ಹೋರಾಟದ ನಡುವೆ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಪ್ರತಿಯೊಬ್ಬ ಭಾರತೀಯನು ಗೌರವಿಸಬೇಕು. ಅವರು ಪ್ರಾಣ ತ್ಯಾಗ, ಬಲಿದಾನದಿಂದ ಎಲ್ಲರು ನೆಮ್ಮದಿಯಿಂದ ರಾತ್ರಿ ನಿದ್ದೆ ಮಾಡಿ ಮುಂಜಾನೆ ಹೇಳುತ್ತಾರೆ. ಅಂತ ಸೇವೆ ಮಾಡುತ್ತಿರುವ ಯೋಧರಿಗೆ ಸೆಲ್ಯೂಟ್ ಮಾಡಬೇಕು ಎಂದರು.
ಆ.15ರಂದು ಬಯಲು ರಂಗಮಂದಿರಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕು, ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಯಾವೊಬ್ಬ ಅಧಿಕಾರಿಗಳು ತಪ್ಪಿಸಿಕೊಳ್ಳುವಂತಿಲ್ಲ. ನಿರ್ಲಕ್ಷ ಮಾಡಿದರೆ ಸುಮ್ಮನಿರುವುದಿಲ್ಲವೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಮಂಜಾನಂದ, ತಾ.ಪಂ ಇಒ ಚಂದ್ರಶೇಖರ್, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ಜಿ.ಪಂ ಎಇಇ ಶಿವಮೂರ್ತಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಎಇ ಸಾದಿಕ್‍ವುಲ್ಲಾ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಮಾಜಿ ಪ.ಪಂ ಅಧ್ಯಕ್ಷ ಮಂಜುನಾಥ್, ಆರೋಗ್ಯ ನಿರೀಕ್ಷಕ ಕಿಫಾಯಿತ್ ಸೇರಿದಂತೆ ಮತ್ತಿತರಿದ್ದರು.