ಸುದ್ದಿವಿಜಯ,ಜಗಳೂರು:ತಾಲೂಕಿನ ಭರಮಸಮುದ್ರ ಗ್ರಾಮದಲ್ಲಿ ಭಾನುವಾರ ರಾತ್ರಿ ಭಾರತೀಯ ಜನಕಲಾ ಸಂಘ ಸಮಿತಿ ಬೀದಿ ನಾಟಕ ಕಲಾ ತಂಡದ ವತಿಯಿಂದ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಜಾತಿಯತೆಯೆ ಕುರಿತು ನಾಟಕದ ಮೂಲಕ ಜನ ಜಾಗೃತಿ ಮೂಡಿಸಿದರು.
ರಾತ್ರಿ ಗ್ರಾಮಕ್ಕೆ ಆಗಮಿಸಿದ ಕಲಾ ತಂಡ ಊರಿನ ಮದ್ಯದಲ್ಲಿ ನಾಟಕ ಜಾತಿ ವ್ಯವಸ್ಥೆಯ ಕುರಿತು ನಾಟಕ ಪ್ರದರ್ಶಿಸಿದರು. ನಂತರ ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಿದರು. ಕಲಾ ತಂಡದವರು ಹಾಡಿ ಜನರು ಚಪ್ಪಾಳೆ ತಟ್ಟಿ ತಲೆದೂಗಿದರು.
ಭಾರತೀಯ ಜನಕಲಾ ಸಂಘ ಸಮಿತಿಯ ಗೌರವಾಧ್ಯಕ್ಷ ಎಂ.ಓಬಪ್ಪ ಮಾತನಾಡಿ, ಹಳ್ಳಿಗಳಲ್ಲಿ ಇನ್ನು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಮುಕ್ತಿ ಸಿಕ್ಕಿಲ್ಲ. ಹಳ್ಳಿಗಳಲ್ಲಿ ವಾಸ ಮಾಡುವ ಎಷ್ಟೋ ದಲಿತ ಜನರು ಹೋಟೆಲ್,
ಕ್ಷೌರದ ಅಂಗಡಿಗಳನ್ನು ಪ್ರವೇಶ ಮಾಡದಂತಹ ಸ್ಥಿತಿ ಎದುರಿಸುತ್ತಿದ್ದಾರೆ. ನಗರಗಳಿಗೆ ತೆರಳಿ ಕ್ಷೌರ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸಂವಿಧಾನದಲ್ಲಿ ಮಾತ್ರ ಸಮಾನತೆ ಇದೆ.
ಆದರೆ, ಇಲ್ಲಿ ಎಲ್ಲಿಯೂ ಸಮಾನತೆ ಜಾರಿಯಾಗಿಲ್ಲ. ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗಿ ದಲಿತರು ನಿಸ್ಸ ಹಾಯಕರಾಗಿದ್ದಾರೆ.
ಅಸ್ಪೃಶ್ಯತೆ ಎನ್ನುವುದು ತಾಂಡವವಾಡುತ್ತಿದೆ. ಜಾತಿ ಪದ್ಧತಿಯು ನಿರ್ಮೂಲನೆಯಾಗಬೇಕು. ಎಲ್ಲರೂ ಸಮಾನ ಹಕ್ಕುಗಳನ್ನು ಪಡೆದುಕೊಂಡು ಸಮಾನತೆಯಿಂದ ಬದುಕಬೇಕು ಎಂದರು.
ಗ್ರಾಮದ ಮುಖಂಡರು ಉಪನ್ಯಾಸಕರು ನಾಗಲಿಂಗಪ್ಪ ಮಾತನಾಡಿ, ಸಾಮಾಜಿಕ ಅಸಮಾನತೆಗಳ ಪ್ರಕರಣಗಳನ್ನು ತಡೆಗಟ್ಟಲು ಕಾನೂನು ಕಠಿಣವಾಗಿದ್ದರು ಸಹ ದೌರ್ಜನ್ಯಗಳು ನಿಂತಿಲ್ಲ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಜನಕಲಾಸಂಘ ತಿಳುವಳಿಕೆ ಮೂಡಿಸುವ ಕೆಲಸಮಾಡುತ್ತಿವೆ ಎಂದರು.
ದೇಶ ಎಷ್ಟೆ ಅಭಿವೃದ್ಧಿ ಹೊಂದಿದರೂ ಸಹ ಸಾಮಾಜಿಕ ಅಸಮಾನತೆಗಳನ್ನ ಹೋಗಲಾಡಿಸಲು ಸಾದ್ಯವಾಗುತ್ತಿಲ್ಲ. ಕಾನೂನುಕಟ್ಟಲೆಗಳು ಇದ್ದರೂ ಸಹ ಅಲ್ಲಲ್ಲಿ ಇನ್ನೂ ಸಹ ದೌರ್ಜನ್ಯದಂತಹ ಪ್ರಕರಣಗಳು ಮುಂದುವರಿಯುತ್ತಿರುವುದು ವಿಷಾದನೀಯ ಎಂದರು.
ಈ ಸಂದರ್ಭದಲ್ಲಿ ಜನಕಲಾ ಸಂಘದ ತಾಲೂಕು ಸಂಚಾಲಕ ರೇವಣ್ಣನಾಯ್ಕ, ಬಡಪ್ಪ ದಾವಣಗೆರೆ ಐರಣಿ ಚಂದ್ರು, ಲೋಕಿಕೆರೆ ಪುರಂದರ, ಆವರಗೆರೆ ಬಾನಪ್ಪ, ಶೌಕತ್ ಆಲಿ, ಖಾದರ್, ಮಹಾಂತೇಶ್ ಕುಕ್ಕವಾಡ, ಶ್ಯಾಗಲೇ ಶರಣಪ್ಪ,
ಗ್ರಾ.ಪಂ.ಸದಸ್ಯರಾದ ತಿಪ್ಪೇಸ್ವಾಮಿ, ಬಸವರಾಜ್, ಕಿರಣ್, ಹನುಮಕ್ಕ ಪೆದ್ದಣ್ಣ, ಲಕ್ಷ್ಮಿ ಮಹಾಂತೇಶ್, ರೈತ ಸಂಘ ಕಾರ್ಯದರ್ಶಿ ಕುಮಾರ್,
ಮಹಾಂತೇಶ್ ಬ್ರಹ್ಮ, ವ್ಯಾಸಗೊಂಡನಹಳ್ಳಿ ರಾಜಪ್ಪ, ಮಾನವ ಬಂದುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್, ಮುಖಂಡ ದಿಬ್ಬದಹಳ್ಳಿ ಪಿ.ನೂರ್ ಅಹಮದ್, ಉಪನ್ಯಾಸಕ ಕಾಮಗೇನತಹಳ್ಳಿ ಎ.ಪಿ.ನಿಂಗಪ್ಪ ಸೇರಿದಂತೆ ಹಲವರು ಇದ್ದರು.