ಸುದ್ದಿವಿಜಯ,ಜಗಳೂರು: ಕೇಂದ್ರ ಸರಕಾರದ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿ ಸಿದ್ದಮ್ಮನಹಳ್ಳಿ ಕೆರೆಯ ಸಮಗ್ರ ಕೆರೆ ಅಭಿವೃದ್ಧಿ ಮಾಡಲು ಅಧಿಕಾರಿಗಳು ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ ಎಂದು ನೂರಾರು ಕೂಲಿಕಾರ್ಮಿಕರು ತಾಲೂಕಿನ ದೊಣೆಹಳ್ಳಿ ಗ್ರಾಪಂ ಎದರು ಮಂಗಳವಾರ ಕಚೇರಿ ಎದುರು ಗುಂಡಿ ತೆಗೆಯುವ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಆರು ತಿಂಗಳಿಂದ ಕೆಲಸ ಕೊಡಿ ಎಂದು ಅಧಿಕಾರಿಗಳನ್ನು ಕೇಳುತ್ತಿದ್ದೇವೆ. ಆದರೆ ಕೆಲಸ ಕೊಡಲು ಸತಾಯಿಸಿ ಸೋಮವಾರ ಎನ್‍ಎಂಆರ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಸಿದ್ದಮ್ಮನಹಳ್ಳಿ ಕೆರೆಯಲ್ಲಿ ಬೃಹದಾಕಾರವಾಗಿ ಸೀಮೇಜಾಲಿ ಗಿಡಗಳು ಬೆಳೆದಿವೆ. ನರೇಗಾ ಕಾನೂನು ಪ್ರಕಾರ ಯಾವುದೇ ಗಿಡಗಳು ಬೆಳೆದರೂ ಅವುಗಳನ್ನು ಗ್ರಾಪಂ ವತಿಯಿಂದ ಕತ್ತರಿಸಿದ ನಂತರವೇ ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಕೊಡಬೇಕು.
ಅಷ್ಟೇ ಅಲ್ಲ ಕಾರ್ಮಿಕರಿಗೆ ನೀರು, ನೆರಳು ಮತ್ತು ಪ್ರಥಮ ಚಿಕಿತ್ಸಾ ಸಲಕರಣೆಗಳನ್ನು ಒದಗಿಸಬೇಕು ಆದರೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಪ್ರತಿಭಟನಾಕಾರರಾದ ಎಂ.ಎನ್ ಬೋರಪ್ಪ, ಮೇಟಿ ದೊಣೆಹಳ್ಳಿ ಲೋಕೇಶ್ ನರೇಗಾ ಎಂಜಿನಿಯರ್ ಮಿಥುನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗಂಡು ಮಕ್ಕಳೇ ಕೆರೆಯಲ್ಲಿ ಬೆಳೆದಿರುವ ಜಾಲಿಗಿಡಗಳ ಮಧ್ಯೆ ನುಸುಳಿ ಹೋಗುವುದು ಕಷ್ಟ ಹಾಗಿದ್ದಾಗ ಹೆಣ್ಣುಮಕ್ಕಳು ಹೇಗೆ ಹೋಗಲು ಸಾಧ್ಯ. ಜಾಲಿ ಕತ್ತರಿಸಲು ಅವಕಾಶ ಕೊಡಿ ಎಂದರೆ ಇಷ್ಟ ಇದ್ರೆ ಕೆಲಸ ಮಾಡಿ ಇಲ್ಲ ಅಂದ್ರೆ ಮನೆಗೆ ಹೋಗಿ ಎಂದು ಮಿಥುನ್ ಅವರು ಉಡಾಫೆಯಾಗಿ ಉತ್ತರಿಸುತ್ತಾರೆ ಎಂದು ಶಿವಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೊದಲೆಲ್ಲ ಪ್ರತಿದಿನ 5 ಮೀಟರ್ ಕೆಲಸ ಮಾಡುತ್ತಿದ್ದೆವು. ವಾರಕ್ಕೆ 50 ಅಡಿ ಒಬ್ಬ ಕಾರ್ಮಿಕ ಮಣ್ಣನ್ನು ಎತ್ತಿ ಹಾಕಬೇಕು ಎಂದು ಹೇಳುತ್ತಾರೆ. ವಿಪರೀತ ಜಾಲಿ, ಪೊದೆಗಳು ಬೆಳೆದಿವೆ ಅದರ ಮಧ್ಯೆ ನಾವು ಹೇಗೆ ಕೆಲಸ ಮಾಡಲು ಸಾಧ್ಯ. ಟ್ರಾಕ್ಟರ್ ವ್ಯವಸ್ಥೆ ಮಾಡದೇ ಮಣ್ಣನ್ನು ಸಾಗಾಣೆ ಮಾಡಲು ಮಹಿಳೆಯರಿಂದ ಸಾಧ್ಯವೇ ಎಂದು ಗೌರಮ್ಮ ಪ್ರಶ್ನಿಸಿದರು.
ಕೂಲಿ ಮಾಡಿದ ಹಣ ಬರುವುದು ವರ್ಷವಾಗುತ್ತೆ:
ಯೋಜನೆ ಅಡಿ ಕೆಲಸ ಮಾಡಿದ ಹಣ ಬರುವುದು ವರ್ಷವಾಗುತ್ತದೆ ಎಂದು ಹೇಳುತ್ತಾರೆ. ನರೇಗಾ ನಿಯಮಗಳ ಪ್ರಕಾರ ಕೂಲಿ ಮಾಡಿದ ವಾರದ ನಂತರ ಎಲ್ಲಾ ಜಾಬ್ ಕಾರ್ಡ್ ಹೊಂದಿದವರಿಗೆ ಹಣ ಹಾಕಬೇಕು. ಆದರೆ ಇವರು ವರ್ಷವಾದರೂ ಹಣ ಹಾಕಲ್ಲ. ಕೇಳಿದರೆ ಏನೇನೋ ಕಾನೂನು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಸಿಬಿಯಲ್ಲಿ ಕೆಲಸ ಮಾಡಲು ನರೇಗಾದಲ್ಲಿ ಅವಕಾಶವಿಲ್ಲ. ಕಾಡು ಅಥವಾ ಪೊದೆಗಳಿಗಳನ್ನು ತೆಗೆಯಲು ಅವಕಾಶವನ್ನು ಕಾರ್ಮಿಕರೇ ಮಾಡಿಕೊಳ್ಳಬೇಕು. ಟ್ರ್ಯಾಕ್ಟರ್ ಮೂಲಕ ಮಣ್ಣೆತ್ತಲು ಅವಕಾಶವಿಲ್ಲ. ಎಸ್ಟಿಮೆಂಟ್‍ನಲ್ಲಿ ಟ್ರ್ಯಾಕ್ಟರ್ ಬಳಕೆಗೆ ಅವಕಾಶವಿಲ್ಲ. ಸಾಮಾಗ್ರಿ ವೆಚ್ಚವನ್ನು ನಾನು ಮಾಡಲು ಬರುವುದಿಲ್ಲ. ಜಂಗಲ್ ಕಟ್ಟಿಂಗ್ ಮಾಡಲು ಅಷ್ಟೂ ಜನಕ್ಕೆ ಅವಕಾಶ ವಿಲ್ಲ. ಕೆಲಸ ಮಾಡುವ ಜಾಗದಲ್ಲಿ 10 ಜನ ಇದ್ದರೆ ಇಬ್ಬರು ಜಂಗಲ್ ಕಟ್ಟಿಂಗ್ ಮಾಡಿ 8 ಜನ ಕೆಲಸ ಮಾಡಬೇಕು. ನಾನು ಕಾನೂನು ಮೂಲಕವೇ ಕೆಲಸ ಮಾಡುವೆ.
-ಮಿಥುನ್, ನರೇಗಾ ಎಂಜಿನಿಯರ್, ದೋಣೆಹಳ್ಳಿ.