ಸುದ್ದಿವಿಜಯ, ಹುಬ್ಬಳ್ಳಿ: ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ. ಹತ್ಯೆಯಾದ ನಾಲ್ಕು ತಾಸಿನ ಒಳಗೇ ಹುಬ್ಬಳ್ಳಿಯ ವಿದ್ಯಾನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬೆಳಗಾವಿಯ ರಾಮದುರ್ಗದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೆಸಿಡೆಂಟ್ ಹೋಟೆಲ್‌ನಲ್ಲಿ 12.24ಕ್ಕೆ ಹತ್ಯೆ ನಡೆಸಿ ಕಾರಿನಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನು ರಾಮದುರ್ಗದಲ್ಲಿ ಸಂಜೆ 4ರ ವೇಳೆಗೆ ಬಂಧಿಸಿದ್ದಾರೆ. ಹುಧಾ ಪೊಲೀಸ್ ಕಮಿಷನರೇಟ್ ಘಟಕದ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬೇನಾಮಿ ಆಸ್ತಿಹೊಂದಿದ್ದ ಗುರೂಜಿ:
ಚಂದ್ರಶೇಖರ್ ಗುರೂಜಿ ಅವರು ರಾಜಕಾರಣಿಗಳ, ಗಣ್ಯವ್ಯಕ್ತಿಗಳ, ಉದ್ಯಮಿಗಳ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು. ಮುಂಬೈ, ಬಾಗಲಕೋಟೆ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರು. ಹುಬ್ಬಳ್ಳಿಯ ಉಣಕಲ್, ಗೋಕುಲ ರಸ್ತೆ, ಕೇಶ್ವಾಪುರ, ಸುಳ್ಳ ರಸ್ತೆಯಲ್ಲು ಸಹ ನಿವೇಶನ ಹೊಂದಿದ್ದರು. ಬೇನಾಮಿ ಆಸ್ತಿ ಸಹ ಹೊಂದಿದ್ದರು ತಿಳಿದು ಬಂದಿದೆ.
ಚಾನೆಲ್ ಸ್ಥಗಿತ; ಕಾಲ್‌ಸೆಂಟರ್ ಕಾರ್ಯಾಚರಣೆ: ‘ಗುರೂಜಿ ನಡೆಸುತ್ತಿದ್ದ ಸರಳ ಜೀವನ ವಾಸ್ತು ಚಾನೆಲ್ ಕಳೆದ ಎರಡು–ಮೂರು ವರ್ಷಗಳಿಂದ ಸ್ಥಗಿತವಾಗಿದೆ. ಆದರೆ, ಮುಂಬೈ, ಬೆಳಗಾವಿ, ಹುಬ್ಬಳ್ಳಿಯ ಐಟಿ ಪಾರ್ಕ್‌ನಲ್ಲಿ ಸರಳ ಜೀವನ ಕಾಲ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದ್ದು, ಎರಡು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಎರಡು ತಿಂಗಳಿನಿಂದ ಸಿಬ್ಬಂದಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು, ಕೆಲವರು ರಾಜೀನಾಮೆ ನಿಡಿದ್ದಾರೆ. ಅವುಗಳ ನಡುವೆಯೇ, ಆರೋಪಿ ಮಹಾಂತೇಶ ಸ್ಥಗಿತಗೊಂಡಿರುವ ಚಾನೆಲ್ ತಾನು ನಡೆಸುವುದಾಗಿ ಗುರೂಜಿಯಲ್ಲಿ ಹೇಳಿದ್ದ. ಆದರೆ ಅದಕ್ಕೆ ಗುರೂಜಿ ಒಪ್ಪದಿದ್ದಾಗ ವಾಗ್ವಾದ ನಡೆದಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನವೇ ರೋಚಕ ಕಹಾನಿ..
ತನ್ನ ಹೆಸರಲ್ಲಿರುವ ಕೆಲವು ದಾಖಲೆ ಪತ್ರಗಳನ್ನು ತಂದಿದ್ದ ಮಹಾಂತೇಶ ಶಿರೂರ, ಹತ್ಯೆಗೈದು ಪರಾರಿಯಾಗುವಾಗ ಅವುಗಳನ್ನು ಹೋಟೆಲ್‌ನಲ್ಲಿಯೇ ಬಿಟ್ಟು ಹೋಗಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಕಮಿಷನರ್ ಲಾಭೂರಮ್, ನಗರ ಅಪರಾಧ ವಿಭಾಗದ ಸಿಬ್ಬಂದಿಗೆ ಸೂಚನೆ ನೀಡಿ ಕ್ಷಿಪ್ರ ಕಾರ್ಯಾಚರಣೆ ಸೂಚನೆ ನೀಡಿದರು. ಪೊಲೀಸರು ಮೊಬೈಲ್ ಲೊಕೇಷನ್ ಜಾಡು ಹಿಡಿದು ಆರೋಪಿಗಳ ಬೆನ್ನು ಹತ್ತಿದ್ದರು. ಧಾರವಾಡ ಮಾರ್ಗವಾಗಿ ಬೆಳಗಾವಿಯಿಂದ ಮುಂಬೈಗೆ ತೆರಳಲು ಯೋಜನೆ ರೂಪಿಸಿದ್ದ ಆರೋಪಿಗಳು, ಗುರುತು ಸಿಗಬಾರದು ಎಂದು ಮಾರ್ಗ ಮಧ್ಯೆಯೆ ಬಟ್ಟೆ ಬದಲಾಯಿಸಿದ್ದರು. ಅದೇ ವೇಳೆ, ಮಹಾಂತೇಶ ಅವರ ಪತ್ನಿ ವನಜಾಕ್ಷಿ ಅವರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದರು.
ಹೋಟೆಲ್ ಬಳಿಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಆರೋಪಿಗಳ ಭಾವಚಿತ್ರಗಳನ್ನು ಹಾಗೂ ಅವರು ಬಳಸಿದ ಕಾರಿನ ಸಂಖ್ಯೆ, ಯಾವ ಕಾರು ಎನ್ನುವ ಮಾಹಿತಿ ಸಂಗ್ರಹಿಸಿ ಹಾವೇರಿ, ಉತ್ತರ ಕನ್ನಡ, ಗದಗ, ಬೆಳಗಾವಿ ಜಿಲ್ಲೆಗೆ ರವಾನಿಸಿದರು. ಪ್ರಮುಖ ಸ್ಥಳಗಳಲ್ಲಿ ಹಾಗೂ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ಪರಿಶೀಲನೆ ಮಾಡಿದರು. ಧಾರವಾಡ–ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಕಾರಿನ ಪತ್ತೆಗೆ ಸಿಬ್ಬಂದಿ ನಿಯೋಜಿಸಿದ್ದರು. ಅದೇ ವೇಳೆ ಮೊಬೈಲ್ ಲೊಕೇಷನ್ ಮಾಹಿತಿಯನ್ನು ಕಂಟ್ರೋಲ್ ರೂಮ್ ಸಿಬ್ಬಂದಿ ವೈರ್‌ಲೆಸ್ ಮೂಲಕ ಕಾರ್ಯಾಚರಣೆ ಸಿಬ್ಬಂದಿಗೆ ಕ್ಷಣಕ್ಷಣಕ್ಕೂ ರವಾನಿಸುತ್ತಿದ್ದರು.