ಸುದ್ದಿವಿಜಯ,ಜಗಳೂರು: ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ಜಮಾಯಿಸಿ ಎಐಟಿಯುಸಿ ಪದಾಧಿಕಾರಿಗಳು ಆಡಳಿತ ಸರಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಐಟಿಯುಸಿ ತಾಲೂಕು ಗೌರವಅಧ್ಯಕ್ಷ ಮಹಮ್ಮದ್ ಭಾಷಾ ಮಾತನಾಡಿ,ಕಳೆದ ಎರಡು ವರ್ಷಗಳಿಂದ ಕೋವಿಡ್ ಪರಿಹಾರದ ನೆಪದಲ್ಲಿ ನೂರಾರು ಕೋಟಿ ಭರಿಸಿ ಕಳಪೆ ಆಹಾರ ಸಾಮಗ್ರಿ ಖರೀದಿಸಿ ನಿರ್ಮಾಣ ಕಾರ್ಮಿಕರಿಗೆ ವಂಚನೆಮಾಡಿರುವ ಕೆಲ ಭ್ರಷ್ಟ ಅಧಿಕಾರಿಗಳು ಹಾಗೂ ಭ್ರಷ್ಟ ರಾಜಕಾರಣಿಗಳ ಮೇಲೆ ನ್ಯಾಯಾಂಗ ತನಿಖೆ ಮಾಡಿ ಕಾನೂನು ರೀತಿ ಶಿಕ್ಷೆಗೊಳಪಡಿಸಿ ನಷ್ಟವನ್ನು ವಸೂಲಿಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರಿಗೆ ಮದುವೆ ಸಹಾಯಧನ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ, ವಿವಿಧ ಸೌಲಭ್ಯಗಳ ಅರ್ಜಿಗಳನ್ನು ಸಲ್ಲಿಸಲು ಆನ್ ಲೈನ್ ವ್ಯವಸ್ಥೆ ಸರಿಪಡಿಸಬೇಕು.
ಕಾರ್ಮಿಕರ ಸ್ವಾಭಾವಿಕ ಸಾವಿಗೆ ರೂ. 5ಲಕ್ಷ ಮತ್ತು ಅಪಘಾತ ಸಾವಿಗೆ ರೂ.10ಲಕ್ಷ, ಕೋವಿಡ್ ಮಹಾಮಾರಿಗೆ ತುತ್ತಾಗಿ ಸಾವನ್ನಪ್ಪಿದವರಿಗೆ ರೂ.2 ಲಕ್ಷ ಪರಿಹಾರಕ್ಕೆ ಮಂಜೂರುಮಾಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ, ನೂತನ ಕಾರ್ಮಿಕರ ಕಾಯ್ದೆ ಹಿಂಪಡೆದು ಹಿಂದಿನ ಕಾರ್ಮಿಕ ಕಾಯ್ದೆಗಳನ್ನು ಮುಂದುವರಿಸಬೇಕು.
ಸೌಲಭ್ಯಕ್ಕಾಗಿ ಅರ್ಜಿಸಲ್ಲಿಸಿದಾಗ ದಾಖಲಾತಿ ವ್ಯತ್ಯಾಸಗಳನ್ನು ಅರ್ಜಿದಾರರಿಗೆ ಮಾಹಿತಿ ನೀಡಿ ತಿರಸ್ಕರಿಸಬೇಕು. ಹಣದಾಸೆಗೆ ನಕಲಿ ಕಾರ್ಮಿಕರ ಕಾರ್ಡ್ ಸೃಷ್ಟಿಸುವವರಿಗೆ ಕಡಿವಾಣ ಹಾಕಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ವೇಳೆ ಎಐಟಿಯುಸಿ ತಾಲೂಕು ಪದಾಧಿಕಾರಿಗಳಾದ ವೀರಣ್ಣ, ತಿಪ್ಪೇಸ್ವಾಮಿ, ಶಿವಮೂರ್ತಿ, ಏಕಾಂತಪ್ಪ, ನಾಗರಾಜ್, ಲೊಕೇಶ್, ಕರಿಬಸಪ್ಪ, ವೀರೇಶ್ ಭಾಗವಹಿಸಿದ್ದರು.