ಸುದ್ದಿವಿಜಯ, ಜಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಶಿಶಿಪಾಲನಾ ಕೇಂದ್ರಗಳನ್ನಾಗಿ ಮತ್ತು ಶಾಲಾ ಪೂರ್ವ ತರಗತಿ ಪ್ರಾರಂಭಿಸಿರುವುದನ್ನು ವಿರೋಧಿಸಿ ಶುಕ್ರವಾರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಂಗನವಾಡಿ ವ್ಯವಸ್ಥೆಯ ವಿರುದ್ದವಾಗಿರುವ ಶಿಶುಪಾಲನಾ ಕೇಂದ್ರ ಮತ್ತು ಪೂರ್ವ ಪ್ರಾಥಮಿಕ ತಗರತಿ ಆರಂಭಿಸಲು ಸರ್ಕಾರ ಹೊರಡಿಸುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿಗಳ ಅಳಿವು ಮತ್ತು ಉಳಿವಿನ ಬಗ್ಗೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಕಳೆದ 48 ವರ್ಷಗಳಿಂದಲೂ ಶೂನ್ಯದಿಂದ 6ವರ್ಷ ವಯೋಮಾನದ ಮಕ್ಕಳಿಗಾಗಿ ದುಡಿದು ಪಾಲನೆಪೋಷಣೆ ಮಾಡಿದ್ದೇವೆ.
ಅಂಗನವಾಡಿ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ ಅದಕ್ಕೆ ಪರ್ಯಾಯವಾಗಿ ಶಿಶು ಪಾಲನಾ ಕೇಂದ್ರಗಳು ಮತ್ತು ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಿಸಿರುವ ಧೋರಣೆ ಸರಿಯಲ. ಜಾರಿಗೊಳಿಸಿರುವ ಆದೇಶವನ್ನು ರದ್ದುಪಡಿಸಬೇಕು, ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
6ನೇ ಗ್ಯಾರಂಟಿ ಘೋಷಣೆಗೆ ಒತ್ತಾಯ
ಚುನಾವಣಾ ಪೂರ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಿಯಾಂಕಾಗಾಂಧಿ ವಾದ್ರಾ ಅವರು ಬೆಳಗಾವಿಯಲ್ಲಿ ಸಂಘಟನೆಯ ನಾಯಕರೊಂದಿಗೆ ಸಮಾಲೋಚಿಸಿ ಗೌರವಧನವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಮತ್ತು ಅಂಗನವಾಡಿ ಸಹಾಯಕರಿಗೆ 10 ಸಾವಿರ ಹೆಚ್ಚಿಸುವ ಹಾಗೂ ನಿವೃತ್ತಿಯಾದವರಿಗೆ ಇಡಿಗಂಟು 3 ಲಕ್ಷ ರೂಗಳನ್ನು ನೀಡುವ ಭರವಸೆಯನ್ನು ಸರಕಾರ 6ನೇ ಗ್ಯಾರಂಟಿ ಘೋಷಣೆಸಿದ್ದು, ಇದನ್ನು ರಾಝ್ಯ ಸರಕಾರ ಘೊಷಿಸಿರುವ ಭರವಸೆಯನ್ನು ಈಡೇರಿಸಬೇಕು ಎಂದು ಫೆಡರೇಷನ್ ಅಧ್ಯಕ್ಷರಾದ ಬಿ.ಎಚ್.ಸುರೀಶಲಮ್ಮ, ಉಪಾಧ್ಯಕ್ಷರಾದ ಡಿ.ಟಿ.ಗೌರಮ್ಮ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಐಟಿಯುಸಿ ಅಧ್ಯಕ್ಷೆ ಟಿ.ಎಚ್ ಸುಶೀಲಮ್ಮ, ಗೌ.ಅಧ್ಯಕ್ಷೆ ಎಚ್. ಭರಮಕ್ಕ, ಉಪಾಧ್ಯಕ್ಷರಾದ ಎಚ್.ಎನ್ ಶಾಂತವೀರಮ್ಮ, ಡಿ.ಟಿ ಗೌರಮ್ಮ, ಪ್ರಧಾನ ಕಾರ್ಯದರ್ಶಿ ಮಹಮದ್ ಭಾಷಾ, ಸಹ ಎಸ್.ಎಂ ಗಿರಿಜಮ್ಮ, ವೈ. ಹಾಲಮ್ಮ, ಎಚ್. ಮಂಜಮ್ಮ ಡಿ. ನಾಗರತ್ನಮ್ಮ ಸೇರಿದಂತೆ ಮತ್ತಿತರಿದ್ದರು.