ಸುದ್ದಿವಿಜಯ,ಜಗಳೂರು: ಪ್ರತಿಯೊಬ್ಬ ಗುರುವಿನ ಆಸೆ ಏನೆಂದರೆ ತಮ್ಮ ಬಳಿ ಕಲಿತ ವಿದ್ಯಾರ್ಥಿಗಳು ಗುರುಗಳನ್ನು ಮೀರಿಸುವಂತೆ ಬೆಳೆದರೆ ಅದೇ ನಮಗೆ ನೀವು ಕೊಡು ದೊಡ್ಡ ಕೊಡುಗೆ ಎಂದು ಹೋ.ಚಿ.ಬೋರಯ್ಯ ಸ್ಮಾರಕ ಪ್ರಥಮ ದರ್ಜೆ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ.ಕೆ.ಕುಮಾರಗೌಡ ಹೇಳಿದರು.
ಪಟ್ಟಣದ ಹೋ.ಚಿ. ಬೋರಯ್ಯ ಸ್ಮಾರಕ ಮಹಾವಿದ್ಯಾಲಯದಲ್ಲಿ ಶನಿವಾರ ಬಿ.ಕಾಂ ಹಳೆಯ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಗುರುವಂದನಾ ಹಾಗೂ ಸ್ನೇಹ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಬೆಳೆಯಬೇಕಾದರೆ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಸ್ವಾರ್ಥವಿರುವ ಈ ಪ್ರಪಂಚದಲ್ಲಿ ಅದರಲ್ಲೂ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಮೂಲಕ ಎತ್ತರಕ್ಕೆ ಬೆಳೆಯಬೇಕು ಎಂದು ಕಿವಿ ಮಾತು ಹೇಳಿದರು.
ಮಹಾವಿದ್ಯಾಲಯದ ಮಾಜಿ ಕಾರ್ಯದರ್ಶಿ ಕೆ.ಪಿ.ಪಾಲಯ್ಯ ಮಾತನಾಡಿ, ಗ್ರಾಮೀಣ ಭಾಗದ ನಮ್ಮ ಕಾಲೇಜು ಜಿಲ್ಲಾ ಹಾಗೂ ಅಂತರ್ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮವಾದ ಅಂಕಗಳೊಂದಿಗೆ ಹೆಸರುವಾಸಿಯಾಗಿದೆ.
ಇದಕ್ಕೆ ಕಾರಣ ಪ್ರಾಂಶುಪಾಲರು, ಪ್ರಾಧ್ಯಾಪಕ ಶ್ರಮ ಅಪಾರವಾದುದು. ಕಷ್ಟ ಕಾಲದಲ್ಲಿ ಕಾಲೇಜನ್ನು ಕಟ್ಟಿ ಬೆಳೆಸಿದವರು ಇಂದು ತೆರೆಮರೆಗೆ ಸರಿದರೂ ಅವರ ಕೊಡುಗೆಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ನುರಿತ ಪ್ರಾಧ್ಯಾಪಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬರದ ತಾಲೂಕಿನ ವಿದ್ಯಾರ್ಥಿಗಳನ್ನು ರೂಪುಗೊಳಿಸಿರುವುದೇ ಇದಕ್ಕೆ ಸಾಕ್ಷಿ ಎಂದರು. ಪ್ರತಿವರ್ಷ 25 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನು ನೀಡುತ್ತಿರುವುದಾಗಿ ಅವರು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಕೆ.ಸಿ.ಬಸವರಾಜಪ್ಪ ಮಾತನಾಡಿ, ಕಾಲೇಜಿನ ಆಡಳಿತ ವರ್ಗ ಸಂಪೂರ್ಣ ಸ್ವಾತಂತ್ರ ನೀಡಿದ್ದರಿಂದಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಯಿತು. ಕೇವಲ ನೂರು ರೂಪಾಯಿ ವೇತನ ಪಡೆಯುತ್ತಿದ್ದಾಗ ಪ್ರಾಧ್ಯಾಪಕರ ವೃತ್ತಿ ಆತ್ಮಗೌರವವನ್ನು ಹೆಚ್ಚಿಸಿತ್ತು.
ಆರ್ಥಿಕ ಮುಗ್ಗಟ್ಟು ಇದ್ದಾಗಲು ಕಾಲೇಜಿನ ಪ್ರಾಧ್ಯಾಪಕರ ನಿಸ್ವಾರ್ಥ ಸೇವೆಯೇ ಕಾಲೇಜು ಅಭ್ಯುದಯಕ್ಕೆ ಕಾರಣವಾಯಿತು. 22 ವರ್ಷಗಳ ಕಾಲ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ, ಪ್ರಾಂಶುಪಾಲನಾಗಿ ಸೇವೆಸಲ್ಲಿಸಿದ್ದು ನಿಜಕ್ಕೂ ಸಂತಸ ತಂದಿತು ಎಂದು ಆಶಯವ್ಯಕ್ತಪಡಿಸಿದರು.
ಇಂಗ್ಲಿಷ್ ಉಪನ್ಯಾಸಕ ಜೆ.ಎ.ಸೀತಾರಾಮ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಡಾಕ್ಟರೇಟ್ ಪಡೆದು ಪ್ರಾಧ್ಯಾಪಕರಾಗಿ ವಿವಿಧ ಕಾಲೇಜುಗಳಲ್ಲಿ ಸೇವೆಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್ನಲ್ಲಿ ನಿಮ್ಮ ಕಾಲೇಜಿಗೆ ಆಗಮಿಸಿ ಪಾಠಮಾಡಿದರೆ ಸಾರ್ಥಕವಾಗುತ್ತದೆ. ಇಲ್ಲಿನ ಮುಕ್ತ ಪರಿಸರ ವಿದ್ಯಾರ್ಥಿಗಳಿಗೆ ಆಹ್ಲಾದಕರ ಉಂಟುಮಾಡುತ್ತದೆ. ಯಾವುದೇ ಧರ್ಮ, ಜಾತಿ ಭೇದವಿಲ್ಲದೇ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದೇವೆ ಎಂದರು.
ಹಳೆಯ ವಿದ್ಯಾರ್ಥಿಗಳಾದ ಪ್ರಕಾಶ್, ಮುತ್ತುರಾಜ್, ಫಕ್ರುದ್ದೀನ್, ಡಾ.ಚಿನ್ನಯ್ಯ ಸೇರಿದಂತೆ ಅನೇಕ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪ್ರಾಧ್ಯಾಪಕರಿಗೆ ಸನ್ಮಾನ
ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಸಿದ್ದಪ್ಪ, ಪ್ರೊ.ಜಿ.ಎ.ಚಂದ್ರಶೇಖರ್, ಡಾ.ಪಿ.ಶ್ರೀಶೈಲಪ್ಪ, ಎನ್.ಹನುಮಂತಪ್ಪ, ಜಿ.ವೈ.ಮೋಹನ್ರೆಡ್ಡಿ, ವೈ.ನಾಗರಾಜ್, ಡಾ.ಎಂ.ನಾರಾಯಣ, ಕಾಲೇಜಿನ ಕಾರ್ಯದರ್ಶಿ, ಜಿ.ಎನ್ ಸೂರಲಿಂಗಪ್ಪ, ಡಾ.ಟಿ.ಜಯ್ಯಣ್ಣ ಸೇರಿದಂತೆ ಆಡಳಿತ ವರ್ಗದವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು.