ಸುದ್ದಿವಿಜಯ, ಜಗಳೂರು: ರೈತರ ಪಂಪಸೆಟ್‍ಗಳಿಗೆ ನಿತ್ಯ 7 ಗಂಟೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಮಿತಿ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯಿಂದ ರೈತರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ, ರಸ್ತೆ ತಡೆ ನಡೆಸಿ ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಇತ್ತೀಚೆಗೆ ರಾತ್ರಿ ನಾಲ್ಕು ಗಂಟೆ ಹಗಲು 3 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ 15 ದಿನಗಳಿಂದ ಕೇವಲ 2 ಗಂಟೆ ವಿದ್ಯುತ್ ಕೊಡುತ್ತಿರುವ ಕಾರಣ ರೈತರು ಕಂಗಾಲಾಗಿದ್ದಾರೆ.
ತೀವ್ರ ಬರಗಾಲ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ಜಗಳೂರು ತಾಲೂಕಿನಲ್ಲಿ ರೈತರು ಮಳೆ ಇಲ್ಲದೇ ಕಂಗಾಲಾಗಿದ್ದಾರೆ. ತಾಲೂಕಿಗೆ ಯಾವುದೇ ನದಿ ಮೂಲವಿಲ್ಲ. ಕಳೆದ ಬಾರಿ ಬಿದ್ದ ಮಳೆಯಿಂದ ಅಲ್ಪ ಸ್ವಲ್ಪ ಕೆರೆಗಳಲ್ಲಿ ನೀರಿದ್ದು ಅಂತರ್ಜಲ ತಳ ಮಟ್ಟಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಇರುವ ತೋಟಗಾರಿಕಾ ಬೆಳೆಗಳಾದ ಅಡಕೆ, ಪಪ್ಪಾಯ, ದಾಳಿಂಬೆ, ಬಾಳೆ ಮುಂತಾದ ಬೆಳೆಗಳನ್ನು ಉಳಿಸಿಕೊಳ್ಳಲು ಅಗತ್ಯ ಏಳು ತಾಸು ವಿದ್ಯುತ್ ಬೇಕು. ಅಧಿಕಾರಿಗಳನ್ನು ಕೇಳಿದರೆ ಉತ್ಪಾದನೆ ಕುಂಟಿತವಾಗಿದೆ ಎಂದು ನೆಪ ಹೇಳುತ್ತಾರೆ. ಸರಕಾರಗಳು ರೈತರ ಹೆಸರೇಳಿ ಅಧಿಕಾರಕ್ಕೆ ಬಂದಿವೆ.
ಈಗ ವಿದ್ಯುತ್ ಕೊಡಿ ಎಂದರೆ ಇಲ್ಲ ಸಲ್ಲದ ಕಾರಣ ಹೇಳುತ್ತಿವೆ. ರೈತರ ಹಿತ ಕಾಪಾಡಬೇಕಾದ ಸರಕಾರಗಳು ಅನ್ನದಾತ ಬೆನ್ನ ಮೇಲೆ ಸವಾರಿ ಮಾಡುತ್ತಿವೆ. ತಕ್ಷಣವೇ ಏಳು ತಾಸು ವಿದ್ಯುತ್ ಪೂರೈಸದೇ ಇದ್ದರೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.
ಒಂದು ಗಂಟೆ ರಸ್ತೆ ತಡೆ:
ವಿದ್ಯುತ್ ಸಮಸ್ಯೆ ಖಂಡಿಸಿ ಪ್ರತಿಭಟನೆಗೆ ಬಂದ ರೈತ ಮುಖಂಡರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಜಾಥಾದ ಮೂಲಕ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಬೃಹತ್ ಮಾನವ ಸರಪಳಿ ರಚಿಸಿ ಬೆಸ್ಕಾಂ ವಿರುದ್ಧ ಧಿಕ್ಕಾರ ಕೂಗಿದರು. ಎಇಇ ಸುಧಾಮಣಿ ಬದಲಿಗೆ ಎಸ್‍ಓ ಅಭಿಷೇಕ್ ಮನವಿ ಸ್ವೀಕರಿಸಲು ಬಂದ ಕಾರಣ ಆಕ್ರೋಶ ವ್ಯಕ್ತಪಡಿಸಿದ ರೈತರು ಎಇಇ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮೊಳಕಾಲ್ಮೂರು, ಮಲ್ಪೆ ರಾಜ್ಯ ಹೆದ್ದಾರಿಯನ್ನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತವಾಗಿತ್ತು. ತಕ್ಷಣ ಮಧ್ಯ ಪ್ರವೇಶಿಸಿದ ಸಬ್‍ಇನ್‍ಸ್ಪೆಕ್ಟರ್ ಎಸ್.ಡಿ.ಸಾಗರ್ ಪ್ರತಿಭಟನಾ ನಿರತ ರೈತರನ್ನು ಮನವೊಲಿಸಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು.