ಸುದ್ದಿವಿಜಯ, ವಿಶೇಷ, ಜಗಳೂರು: ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರದಿಂದ ಮೂರು ದಿನಗಳ ಕಾಲ ಪಡಿತರ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಟ್ಟಿದ್ದರೂ ಒಂದೇ ಒಂದು ಅರ್ಜಿ ಸಲ್ಲಿಸಲಾಗದೇ ಜನ ಹೈರಾಣಾಗುತ್ತಿದ್ದಾರೆ.
ಹೌದು, ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಕಲಬುರಗಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ಶಿವಮೊಗ್ಗ, ತುಮಕೂರು, ವಿಜಯನಗರ, ರಾಯಚೂರು. ರಾಮನಗರ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಪಡಿತರ ಸೇರ್ಪಡೆಗೆ ಅವಕಾಶ ಕೊಡಲಾಗಿದೆ.
ಆದರೆ ಸರ್ವರ್ ಸಮಸ್ಯೆಯಿಂದ ಎರಡು ದಿನಗಳಾದರೂ ದಿನಕ್ಕೆ ಒಂದೆರಡು ಅರ್ಜಿಗಳು ಸಲ್ಲಿಕೆಯಾಗದೇ ಮಕ್ಕಳು, ದೊಡ್ಡವರು ಕಾದು ಕಾದು ಮನೆಗಳಿಗೆ ಹಿಂದಿರುಗುವ ದುಸ್ಥಿತಿ ನಿರ್ಮಾಣವಾಗಿದೆ.
ದಿನವಿಡೀ ಕಾದರೂ ಸರ್ವರ್ ಸಮಸ್ಯೆ ಬಗೆ ಹರಿಯದ ಕಾರಣ ಒಂದೇ ಒಂದು ಅರ್ಜಿ ಸಲ್ಲಿಕೆಯಾಗುತ್ತಿಲ್ಲ. ಬುಧವಾರ ಮಧ್ಯಾಹ್ನ ಸರ್ವರ್ ಕೊಟ್ಟಾಗ ಒಂದು ಅಥವಾ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಗುರುವಾರ ಒಂದೇ ಒಂದು ಅರ್ಜಿಗಳು ಸಲ್ಲಿಕಾಯಾಗಿಲ್ಲ. ಮಧ್ಯಾಹ್ನ, ಸಂಜೆ ವೇಳೆಗೆ ಸರ್ವರ್ ನಿದ್ರಾವಸ್ಥೆಗೆ ಜಾರಿದ್ದರಿಂದ ಜನ ಹಿಡಿ ಶಾಪ ಹಾಕಿದರು.
ಕರ್ನಾಟಕ ಒನ್, ಗ್ರಾಮ ಒನ್‍ಗಳಲ್ಲಿ ಜನ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂತು. ಈಗಾಗಲೇ ಎರಡು ದಿನ ಸರ್ವರ್ ಸಮಯ ಕಳೆದು ಹೋಗಿದೆ. ಇರುವುದು ಒಂದೇ ದಿನ (ಶುಕ್ರವಾರ) ಏನು ಮಾಡುವುದು ಎಂದು ಜನ ಗೊಣಗಾಡುವ ದೃಶ್ಯ ಕಂಡು ಬಂತು.
ಒಂದು ಅರ್ಜಿಗೆ ಇಡೀ ದಿನ ಕಾಯಬೇಕು. ಕೆಲಸ ಬಿಟ್ಟು ಬಂದಿದ್ದೇವೆ. ಮಕ್ಕಳಿಗೆ ರಜೆ ಇದೆ ಎನ್ನುವ ಕಾರಣಕ್ಕೆ ಪಡಿತ ಸೇರ್ಪಡೆಗೆ ಸುಸಮಯ ಎಂದು ಬಂದರೂ ಸರ್ವರ್ ಕೆಲಸ ಮಾಡದ ಕಾರಣ ಬಿಸಿಲಿನಲ್ಲಿ ಮಕ್ಕಳು ಬಳಲುತ್ತಿದ್ದಾರೆ. ಬಸ್‍ಚಾರ್ಜ್, ಊಟ, ತಿಂಡಿ ಹೀಗೆ ಸಿಕ್ಕಾಪಟ್ಟೆ ಖರ್ಚು ಮಾಡಬೇಕು. ಬರಗಾಲ ಬಂದಿದೆ ಹಣವಿಲ್ಲ. ಪಟ್ಟಣಕ್ಕೆ ಬಂದು ಹೋದರೆ ಕನಿಷ್ಠ 500 ರೂ ಬೇಕಾಗುತ್ತದೆ. ಇಷ್ಟೆಲ್ಲಾ ಖರ್ಚುಮಾಡಿದರೂ ಉದ್ದೇಶ ಈಡೇರುತ್ತಿಲ್ಲ ಎಂದು ಜನ ಸರ್ವರ್ ಮತ್ತು ವ್ಯವಸ್ಥೆಗೆ ಹಿಡಿ ಶಾಪ ಹಾಕಿದರು.
ಉಸಿರುಗಟ್ಟುವ ವಾತಾವರಣ:
ನನ್ನದು ಮೊದಲು, ನನ್ನದು ಮೊದಲು ಎಂದು ಜನ ಮುಗಿ ಬೀಳುತ್ತಿರುವುದರಿಂದ ಗ್ರಾಮ ಒನ್ ಕೇಂದ್ರಗಳಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಮಕ್ಕಳನ್ನು ಕರೆ ತಂದು ಸೇರ್ಪಡೆ ಮಾಡಿಸುವ ಪೋಷಕರ ಪೀಕಲಾಟ ಹೇಳತೀರದಾಗಿತ್ತು.ಮಕ್ಕಳಿಗೆ ಹಸಿವೆಯಾದರೂ ಊಟಕ್ಕೆ ಕರೆದುಕೊಂಡು ಹೋದರೆ ಎಲ್ಲಿ ತಮ್ಮ ಸರಿದಿ ಹೋಗುತ್ತದೋ.. ಮತ್ತೆ ನಾಳೆ ಬರಬೇಕು ಎನ್ನವ ಚಿಂತೆಯಿಂದ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂತು.
ಪಡಿತರ ತಿದ್ದುಪಡಿಗೆ ಆಗುತ್ತಿರುವ ಸರ್ವರ್ ಒತ್ತಡ ತಪ್ಪಿಸುವುದಕ್ಕಾಗಿಯೇ ರಾಜ್ಯ ಸರಕಾರ ತಿದ್ದುಪಡಿ ಅರ್ಜಿ ಸಲ್ಲಿಕೆಗೆ ವಿಭಾಗವಾರು ಪ್ರತ್ಯೇಕ ದಿನ ನಿಗದಿ ಮಾಡಿದ್ದರೂ ಸಹ ಸಮಸ್ಯೆ ಮಾತ್ರ ಉಲ್ಬಣವಾಗುತ್ತಿದೆ. ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತರೂ ಒಂದೇ ಒಂದು ಅರ್ಜಿ ಸಲ್ಲಿಕೆಯಾಗುವುದು ಕಷ್ಟವಾಗುತ್ತಿದೆ ಎಂದು ತೋರಣಗಟ್ಟೆ ಗ್ರಾಮ ಒನ್ ಸಿಬ್ಬಂದಿ ಕೆ.ಎಚ್.ತಿಪ್ಪೇಸ್ವಾಮಿ ಸಮಸ್ಯೆ ಬಿಚ್ಚಿಟ್ಟರು.
ಈ ವ್ಯವಸ್ಥೆ ಅಧ್ವಾನ:
ಪಡಿತರ ಸೇರ್ಪಡೆ ಮತ್ತು ತಿದ್ದುಪಡಿಗೆ ಸರ್ವರ್ ಸಮಸ್ಯೆಯ ಬಗ್ಗೆ ತಹಶೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಗ್ಯಾರಂಟಿಗಳನ್ನು ತಂದು ಸರಕಾರ ಸರ್ವರ್ ಸಮಸ್ಯೆ ಮಾಡಿದೆ. ಎಲ್ಲದಕ್ಕೂ ಒಂದೇ ಸರ್ವರ್ ಎಂದರೆ ಹೇಗೆ. ದಿನವಿಡೀ ಕೆಲಸ ಬಿಟ್ಟು ಕಾಯುತ್ತಿದ್ದೇವೆ. ಈ ವ್ಯವಸ್ಥೆ ತೀರಾ ಅಧ್ವಾನ ಎಂದು ಅರ್ಜಿ ಸಲ್ಲಿಸಲು ಬಂದ ಮಹಿಳೆಯರು, ಪುರುಷರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹನುಮಂತಾಪುರ, ಬಿಳಿಚೋಡು, ಗುರುಸಿದ್ದಾಪುರ, ಬಿದರಕೆರೆ, ಬಿಳಿಚೋಡು, ಗುತ್ತಿದುರ್ಗ, ಅಸಗೋಡು, ತೋರಣಗಟ್ಟೆ ಗ್ರಾಮಗಳ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶವಿದ್ದರೂ ಅರ್ಜಿಗಳು ಸಲ್ಲಿಕೆಯಾಗಲೇ ಇಲ್ಲ.
ಹೈಲೆಟ್ಸ್:
ಸರ್ವರ್ ಸಮಸ್ಯೆಯಿಂದ ಜನ ಹೈರಾಣ
ತಿದ್ದುಪಡಿ, ಸೇರ್ಪಡೆಗೆ ಸುಸ್ತೋಸುಸ್ತು
ದಿನವಿಡೀ ಕುಳಿತರೂ ಸಲ್ಲಿಕೆಯಾದ ಅರ್ಜಿಗಳು
ಅವಧಿ ವಿಸ್ತರಿಸಿ ಎಂದು ಆಗ್ರಹ