ಸುದ್ದಿವಿಜಯ, ಜಗಳೂರು: ಇ-ಸ್ವತ್ತು ಮಾಡಿಕೊಡಲು ₹10 ಸಾವಿರ ರೂ ಹಣಕ್ಕೆ ಬೇಡಿಕೆಯಿಟ್ಟು ಹಣ ಪಡೆಯುವಾಗ ತಾಲೂಕಿನ ಕೆಚ್ಚೇನಹಳ್ಳಿ ಗ್ರಾಪಂ ಪಿಡಿಒ ಎಸ್.ಎಂ.ನಂದಿಲಿಂಗೇಶ ಸಾರಂಗಮಠ ಮತ್ತು ಡಾಟಾ ಎಂಟ್ರಿ ಆಪರೇಟರ್ ಅಜ್ಜಯ್ಯ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಕೆಚ್ಚೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಳಗೋಟೆ ಗ್ರಾಮದ ಬಸವನಗೌಡ ಎಂಬುವರಿಂದ ಇ-ಸ್ವತ್ತು ಮಾಡಿಕೊಡಲು ಹತ್ತು ಸಾವಿರ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದ ಪಿಡಿಒ ಎಸ್.ಎಂ.ನಂದಿಲಿಂಗೇಶ ಸಾರಂಗಮಠ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಹತ್ತು ಸಾವಿರ ಹಣ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ಮಾರ್ಗ ದರ್ಶನದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಪ್ರಭು ಬಿ.ಸುರಿನ್, ರಾಷ್ಟ್ರಪತಿ ಮತ್ತು ಮಧುಸೂದನ್ ಮೂರು ಜನರ ತಂಡ ತಾಪಂ ಕಚೇರಿಯ ಮೇಲೆ ದಾಳಿ ಮಾಡಿದೆ.
ಪಿಡಿಒ ಎಸ್.ಎಂ.ನಂದಿಲಿಂಗೇಶ ಸಾರಂಗಮಠ
ಆಗ ಕಚೇರಿಯ ಒಳಗೆ ಬಸವನಗೌಡ ಎಂಬುವರಿಂದ ₹10 ಸಾವಿರ ಹಣ ಪಡೆಯುತ್ತಿರುವಾಗ ಪಿಡಿಒ ಎಸ್.ಎಂ.ನಂದಿಲಿಂಗೇಶ ಸಾರಂಗಮಠ ಲೋಕಾಯುಕ್ತ ಪೊಲೀಸರಿಗೆ ನೇರವಾಗಿ ಸಿಕ್ಕಿಬಿದ್ದಿದ್ದಾರೆ.ಡಾಟಾ ಎಂಟ್ರಿ ಆಪರೇಟರ್ ಅಜ್ಜಯ್ಯ
ಲಂಚ ಮುಟ್ಟಿಲ್ಲ ಪಿಡಿಒ ವಾದ: ನಾನು ಇ-ಸ್ವತ್ತು ಮಾಡಿಕೊಡಲು ಬಸವನಗೌಡರಿಂದ ಹಣಕ್ಕೆ ಬೇಡಿಕೆಯಿಟ್ಟಿಲ್ಲ ಎಂದು ಪಿಡಿಒ ಎಸ್.ಎಂ.ನಂದಿಲಿಂಗೇಶ ಸಾರಂಗಮಠ ಲೋಕಾಯುಕ್ತ ಇನ್ಸ್ಪೆಕ್ಟರ್ ಜೊತೆ ವಾದಿಸಿದರು.
ಹಾಗಾದರೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೊ ಯಾರದ್ದು, ಡಾಟಾ ಎಂಟ್ರಿ ಆಪರೇಟರ್ ಬಳಿ ಹತ್ತು ಸಾವಿರ ಹಣ ಹೇಗೆ ಬಂತು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ಗಳ ತಂಡ ಪಿಡಿಒ ಮತ್ತು ಡಾಟಾ ಎಂಟ್ರಿ ಆಪರೇಟರ್ ಅಜ್ಜಯ್ಯ ಅವರನ್ನು ಪ್ರಶ್ನಿಸಿದರು.
ಅಷ್ಟೇ ಅಲ್ಲ ತಾಪಂ ಇಓ ಕೆ.ಟಿ.ಕರಿಬಸಪ್ಪ ಮತ್ತು ಎಲ್ಲ ಸಿಬ್ಬಂದಿಗಳನ್ನು ಕರೆದು ಕೂಲಂಕಷವಾಗಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.