ಜಗಳೂರು: ಸೊಕ್ಕೆ ಗ್ರಾಮದಲ್ಲಿ ವಿಜೃಂಭಣೆಯಿಂದ ಸಾಯಿ ಮಂದಿರ ಲೋಕಾರ್ಪಣೆ

Suddivijaya
Suddivijaya November 22, 2023
Updated 2023/11/22 at 1:46 PM

ಸುದ್ದಿವಿಜಯ, ಜಗಳೂರು: ‘ಸಬ್ ಕಾ ಮಾಲೀಕ್ ಏಕ್’ ಎನ್ನುವ ಮೂಲಕ ಭಗವಂತ ಎಲ್ಲರಿಗೂ ಒಬ್ಬನೇ ಎಂದು ಸಾರಿದ ಮಹಾನ್ ಸಂತ ಸಾಯಿಬಾಬಾ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಸಂಘರ್ಷಗಳು ಕ್ಷೀಣವಾಗುತ್ತವೆ ಎಂದು ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮೀಜಿಗಳು ಹೇಳಿದರು.

ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಬುಧವಾರ ಪ್ರೊ.ತಿಪ್ಪೇಸ್ವಾಮಿ ಮತ್ತು ಪುತ್ರಿ ಸ್ವಾತಿ ತಿಪ್ಪೇಸ್ವಾಮಿ ನಿರ್ಮಾಣ ಮಾಡಿರುವ ನೂತನ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಪ್ರಾರಂಭೋತ್ಸವ, ವಿಮಾನ ಗೋಪುರ ಕಳಸಾರೋಹಣ ಹಾಗೂ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರು 12ನೇ ಶತಮಾನದಲ್ಲಿ ದೇವನೊಬ್ಬ ನಾಮ ಹಲವು ಎಂದರು. ಲೋಕ ಪೂಜ್ಯರದ ಸಾಯಿಬಾಬಾರು ಅದನ್ನೇ ಪ್ರತಿಪಾದಿಸಿದರು. ಸಾಯಿ ಎಂದರೆ ಒಳ್ಳೆಯವರು, ಜಗತ್ತಿಗೆ ಒಳ್ಳೆಯದನ್ನು ಬಯಸುವವರು.

ಯಾರು ಅವರನ್ನು ಶ್ರದ್ಧಾ ಭಕ್ತಿಗಳಿಂದ ಪೂಜಿಸಿ ಗೌರವಿಸುತ್ತಾರೋ ಅವರ ಪಾಲಿಗೆ ಬಾಬಾ ಸಂಜೀವಿನಿಯಾಗಿ ಕಾಣುತ್ತಾರೆ ಇದಕ್ಕೆ ಪ್ರೊ.ಜಿ.ಎಂ.ತಿಪ್ಪೇಸ್ವಾಮಿ ಉದಾಹರಣೆ.

ಅವರ ಪುತ್ರಿ ಸ್ವಾತಿ ಸಾಫ್ಟ್‍ವೇರ್ ಎಂಜಿನಿಯರ್ ಆದರೂ ಗ್ರಾಪಂ ಅಧ್ಯಕ್ಷರಾಗಿ ಗ್ರಾಮೀಣ ಜನರ ಸೇವೆಗೆ ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಬೆಳೆಯುವ ಸಾಮರ್ಥ್ಯ ಅವರಲ್ಲಿದೆ ಎಂದು ಆಶೀರ್ವದಿಸಿದರು.

ಶಾಸಕ ಬಿ.ದೇವೇಂದ್ರಪ್ಪ ಕಷ್ಟದಲ್ಲಿ ಬೆಳೆದು ಈಗ ಶಾಸಕರಾಗಿದ್ದಾರೆ. ಅವರಿಂದ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಲಿ.

ಕ್ಷೇತ್ರದ ಸಮಗ್ರ ಅಭಿವೃದ್ಧಿ ಆಗದಿದ್ದರೆ ರಾಜೀನಾಮೆಗೂ ಸಿದ್ದ ಎಂದು ಹೇಳಿದ್ದು ಅವರ ಬದ್ಧತೆ ತೋರಿಸುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಮಾತನಾಡಿ, ಸಾಧು ಸಂತರ ನೆಲವೀಡಾಗಿರುವ ಕರ್ನಾಟಕದಲ್ಲಿ ಪ್ರಸ್ತುತ 120 ವರ್ಷಗಳಲ್ಲೇ ಎಂದೂ ಇಂತಹ ಬರಗಾಲ ಎದುರಿಸಿರಲಿಲ್ಲ.

ಲೋಕ ಕಲ್ಯಾಣವಾಗಬೇಕಾದರೆ ಧಾರ್ಮಿಕ ಕಾರ್ಯಗಳು, ದೇವಸ್ಥಾನಗಳ ನಿರ್ಮಾಣವಾಗಬೇಕು ನಮ್ಮ ಸರಕಾರ ಬರಗಾಲವನ್ನು ಎದುರಿಸಲು ಸಿದ್ಧವಾಗಿದೆ ಎಂದರು.

ನೊಣವಿನಕೆರೆ ವಿರಕ್ತ ಮಠದ ಡಾ.ಶಿವಾನುಭವ ಚರವರ್ಯ ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಗುರುವಿನ ಗುಲಾಮನಾಗಬೇಕು. ಮನೆಯಲ್ಲಿ ಸಂಸ್ಕಾರ, ಶಾಲೆಯಲ್ಲಿ ಶಿಕ್ಷಣ ಜೊತೆಗೆ ದೇವಸ್ಥಾನಗಳನ್ನು ನಿರ್ಮಾಣ ಮಾಡಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಈ ನಿಟ್ಟಿನಲ್ಲಿ ತಿಪ್ಪೇಸ್ವಾಮಿ ಅವರು ಜನ ಕಲ್ಯಾಣಕ್ಕಾಗಿ ದೇವಸ್ಥಾನ ನಿರ್ಮಿಸಿ ಬಾಬಾರ ದರ್ಶನ ಕಲ್ಪಿಸಿದ್ದಾರೆ ಎಂದರು.  ಸುತ್ತೂರು ಮಠದ ಶ್ರೀಗಳಿಂದ ಪ್ರೊ.ತಿಪ್ಪೇಸ್ವಾಮಿ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.ಸುತ್ತೂರು ಮಠದ ಶ್ರೀಗಳಿಂದ ಪ್ರೊ.ತಿಪ್ಪೇಸ್ವಾಮಿ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.

ಕಣ್ವಕುಪ್ಪೆ ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವ್ಯಾಸ ಮಹರ್ಷಿಗಳು 18 ಪುರಣಗಳನ್ನು ರಚಿಸಿದ್ದಾರೆ. ಅದರ ಸರ್ವಾರ್ಥ ಏನೆಂದರೆ ಪರೋಪಕಾರಂ ಇದಂ ಶರೀರಂ ಎಂಬುದಾಗಿದೆ. ಧರ್ಮ ಉಳಿಬೇಕಾದರೆ ಸಮಾಜ ಕಲ್ಯಾಣ ಕಾರ್ಯಗಳನ್ನು ಮಾಡಬೇಕು ಎಂದರು.

ಪ್ರೊ.ತಿಪ್ಪೇಸ್ವಾಮಿ ಮಾತನಾಡಿ, ತಂದೆ, ತಾಯಿಯ ಆಶೀರ್ವಾದದಿಂದ ದೇವಸ್ಥಾನದ ನಿರ್ಮಾಣಕ್ಕೆ ಪ್ರೇರಣೆಯಾಯಿತು. ನನಗೆ ಸುತ್ತೂರು ಶ್ರೀಗಳ ಆಶೀರ್ವಾದ ಇಲ್ಲದಿದ್ದರೆ ನಾನು ಈ ಮಟ್ಟಕ್ಕೆ ಬೆಳೆಯಿತ್ತಿರಲಿಲ್ಲ ಎಂದು ಸ್ಮರಿಸಿದರು.

ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಿ ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ಶಾಸಕರಾದ ಬಸವರಾಜ್ ಶಿವಗಂಗಾ,

ಮಂಡ್ಯ ಶಾಸಕ ಪಿ.ರವಿಕುಮಾರ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಅಸಗೋಡು ಜಯಸಿಂಹ, ಆರ್ ಎಸ್‍ಎಸ್ ಕಾರ್ಯವಾಹ ಎನ್.ತಿಪ್ಪೇಸ್ವಾಮಿ, ಪಿಸಿಬಿ ಅಧ್ಯಕ್ಷರಾದ ಡಾ.ಶಾಂತ ಎ.ತಿಮ್ಮಯ್ಯ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ, ಟಗರು ಪಲ್ಯ ಸಿನಿಮಾ ನಟ ನಾಗಭೂಷಣ್ ಮಾತನಾಡಿದರು.

ಡಾಲಿ ಧನಂಜಯ್ ಮಾತಿಗೆ ಫೀದಾ ಆದ ಜನ

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಚಿತ್ರನಟ ಡಾಲಿ ಧನಂಜಯ, ಕಾಯಕವೇ ಕೈಲಾಸ ಎಂಬ ಮಾತಿಗಿಂತ ದೊಡ್ಡ ಮಾತು ಯಾವುದೂ ಇಲ್ಲ. ಕಾಯಕದಲ್ಲಿ ನಿರತರಾದೊಡೆ ಲಿಂಗ, ಜಂಗಮವನ್ನಾದರೂ ಮರೆ ಎಂದು ಅಲ್ಲಮ ಪ್ರಭು ಹೇಳಿದ್ದಾರೆ.ಯಾರು 100 ರೂ ದುಡಿಯುತ್ತಾನೋ ಅವನೇ ನಿಜಯವಾದ ಬಾಸ್. ನೀವಾಯ್ತು ನಿಮ್ಮ ಕೆಲಸವಾಯ್ತು ಎಂದು ದುಡಿಯಬೇಕು.

ದೇವರು ಎಂದರೆ ಸಲ್ಯೂಷನ್ ಆಗಬೇಕು ಸಮಸ್ಯೆಯಾಗಬಾರದು. ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಭಾಷೆಯ ಸಿನಿಮಾ ನೋಡಿ ಎಂದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!