ಸುದ್ದಿವಿಜಯ, ಜಗಳೂರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕರು ಹಾಗೂ ಕೃಷಿ ಅಧಿಕಾರಿಗಳ ತಂಡ ಬುಧವಾರ ತಾಲೂಕಿನ ಬಿಳಿಚೋಡು ಗ್ರಾಮದ ರೈತ ಅಂಜಿನಪ್ಪ ಜಮೀನಿನಲ್ಲಿ ಒಣಗಿದ ಮೆಕ್ಕೆಜೋಳ ವೀಕ್ಷಣೆ ಮಾಡಿ ರೈತರಿಂದ ಅಹವಾಲು ಸ್ವೀಕರಿಸಿದರು.
ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬರದ ವಿಚಾರವಾಗಿ ಕೇಂದ್ರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ನಾನು ಗುರುವಾರ ದೆಹಲಿಗೆ ಹೋಗುತ್ತಿದ್ದೇವೆ. ಅಲ್ಲಿ ಸಭೆ ನಡೆಸಿ ಬರದ ಬಗ್ಗೆ ಮನವರಿಕೆ ಮಾಡುತ್ತೇವೆ. ಒಂದು ವಾರದ ಒಳಗೆ ಪರಿಹಾರ ಘೋಷಣೆ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.
ಬರದ ಹಿನ್ನೆಲೆ ಜನ ಗುಳೆ ಹೋಗದೆ ಇರಲು ನರೇಗಾ ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಲಾಗಿದೆ. ಬರವನ್ನು ಸಮರ್ಥವಾಗಿ ನಿಭಾಯಿಸಲು ನಾವು ಸಿದ್ಧವಿದ್ದೇವೆ ಎಂದರು.
ವಿಜಯೇಂದ್ರ, ಆರ್.ಅಶೋಕ್ ವಿರುದ್ಧ ಟೀಕೆ:
ಹೊಸದಾಗಿ ಬಿಜೆಪಿ ಅಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಕೇಂದ್ರಕ್ಕೆ ಗೊತ್ತಾಗಲು ನಮ್ಮ ಸರಕಾರದ ವಿರುದ್ಧ ಟೀಕೆ ಮಾಡುತ್ತಾರೆ. ಕೇಂದ್ರಕ್ಕೆ ಗೊತ್ತಾಗಲು ರೌಂಡ್ಸ್ ಮಾಡುತ್ತಿದ್ದಾರೆ. ಯಾರು ಇಲ್ಲದ ಹಿನ್ನಲೆ ಅನಿವಾರ್ಯವಾಗಿ ಅವರನ್ನು ಅಧ್ಯಕ್ಷ, ವಿರೋಧ ಪಕ್ಷ ನಾಯಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಕುಟುಕಿದರು.ಈ ವೇಳೆ ಶಾಸಕ ಬಸವರಾಜ್ ಶಿವಗಂಗಾ, ಮಂಡ್ಯ ಶಾಸಕ ಪಿ.ರವಿಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಎಡಿಎ ಮಿಥುನ್ ಕಿಮಾವತ್, ರೈತ ಮುಖಂಡರಾದ, ರೈತ ಮುಖಡರಾದ ರಾಜನಹಟ್ಟಿ ರಾಜು, ಹನುಮಂತಾಪುರ ರಂಗಪ್ಪ, ಬಿಳಿಚೋಡು ಪ್ರಹ್ಲಾದ್, ಬಸಪ್ಪ, ರಂಗಪ್ಪ, ಹುಸೇನ್ ಸಾಬ್, ಹೊನ್ನೂರ್ ಆಲಿ ಸೇರಿದಂತೆ ಅನೇಕರು ಇದ್ದರು.