ಸುದ್ದಿವಿಜಯ, ಜಗಳೂರು: ಇಚ್ಛಾಶಕ್ತಿ ಮತ್ತು ನಿರಂತರ ಪ್ರಯತ್ನದಿಂದ ಏನು ಬೇಕಾದರೂ ಸಾಧನೆ ಮಾಡಬಹುದು. ಪೋಷಕರು ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿದರೆ ಮಾತ್ರ ಆಲೋಚನೆ ಮತ್ತು ವಿವೇಚನೆ ಬೆಳೆಯಲು ಸಾಧ್ಯ ಎಂದು ಶಿಕ್ಷಣ ತಜ್ಞ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ವಿ.ವಾಮದೇವಪ್ಪ ಅಭಿಪ್ರಾಯ ಪಟ್ಟರು.
ಪಟ್ಟಣದ ಅಮರ ಭಾರತಿ ವಿದ್ಯಾ ಕೇಂದ್ರ ಆವರಣದಲ್ಲಿ 2023-24ನೇ ಸಾಲಿನ ಶಾಲಾ/ ಕಾಲೇಜು ವಾರ್ಷಿಕೋತ್ಸವ ಹಾಗೂ ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿಯವರ ಪುಣ್ಯಸ್ಮರಣೆ ಸಮಾರಂಭವನ್ನು ಭಾನುವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಲ್ಲಿ ಉನ್ನತ ಗುರಿಯನ್ನು ಇಟ್ಟುಕೊಳ್ಳುವಂತೆ ಕನಸುಗಳನ್ನು ಬಿತ್ತಬೇಕು. ನಿತ್ಯ ನಿಮ್ಮ ಮಗು ಶಾಲೆಯಲ್ಲಿ ಏನು ಕಲಿತಿದೆ ಎಂಬುದರ ಬಗ್ಗೆ ಅವಲೋಕ ಮಾಡಬೇಕು. ಪರೀಕ್ಷಾ ಪದ್ಧತಿಗಳ ಬಗ್ಗೆ ಮಗುವಿಗೆ ತಿಳಿಸಬೇಕು. ಮಗುವಿನಲ್ಲಿರುವ ಜ್ಞಾನ ಮೌಲ್ಯವಾಗಿ ಪರಿವರ್ತನೆಯಾದಾಗ ಮಾತ್ರ ನೀವು ಕೊಡಿಸುವ ಶಿಕ್ಷಣ ಸಾರ್ಥಕವಾಗುತ್ತದೆ ಎಂದರು.
ಪಕ್ಕದ ಮನೆಯ ಮಗುವಿನ ಭೌದ್ಧಿಕತೆಗೆ ನಿಮ್ಮ ಮಗುವಿನ ಭೌದ್ಧಿಕತೆಯನ್ನು ಹೋಲಿಸಬೇಡಿ. ವಿಜ್ಞಾನ ಓದಿದರೆ ಉತ್ತಮ ಎಂಬ ಭ್ರಮೆ ಬಿಡಿ. ಕಲಾ ವಿಭಾಗದಲ್ಲೂ ಸಾಧನೆ ಮಾಡಿದ ಅನೇಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಐಎಎಸ್, ಕೆಎಎಸ್, ಐಆರ್ಎಸ್ ಹುದ್ದೆಯಲ್ಲಿದ್ದಾರೆ.
ಅಂಕಗಳಿಂದ ಮಕ್ಕಳನ್ನು ಅಳೆಯಬೇಡಿ. ನಿಮ್ಮ ಇಚ್ಛೆಗಳನ್ನು ಮಗುವಿನ ಮೇಲೆ ಹೇರಬೇಡಿ. ಕವಿ ಕುವೆಂಪು ಹೇಳಿದಂತೆ ‘ಮಕ್ಕಳನ್ನು ಗೋಣಿ ಚೀಲಗಳನ್ನಾಗಿಸದೇ ಭತ್ತ ಬೆಳೆಯುವ ಗದ್ದೆಗಳನ್ನಾಗಿ’ ಮಾಡಿ ಎಂದು ಪೋಷಕರಿಗೆ ತಿಳಿ ಹೇಳಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನನ್ನನ್ನು ಮತ್ತು ನನ್ನ ಮಕ್ಕಳನ್ನು ಈ ಮಟ್ಟಕ್ಕೆ ಬೆಳೆಸಲು ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಕಾರಣ. ಅವರ ಶರೀರ ದೂರವಾಗಿದ್ದರೂ ಅವರು ಹಾಕಿಕೊಟ್ಟ ಮೌಲ್ಯಗಳು ಜೀವಂತವಾಗಿವೆ.
1980 ರಲ್ಲಿ ಈ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. 1984 ರಲ್ಲಿ ಇದೇ ಕಾಲೇಜಿನಲ್ಲಿ ಡಿ-ದರ್ಜೆ ನೌಕರನಾಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಶಾಸಕನಾದೆ.
ಮೂಕನಾಗಿದ್ದ ನನ್ನನ್ನು ಈ ಶಿಕ್ಷಣ ಸಂಸ್ಥೆ ವಿಧಾನಸೌಧದಲ್ಲಿ ಮಾತನಾಡುವಂತೆ ಮಾಡಿತು. ಈ ಮಣ್ಣಿನ ಋಣ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್ ಮಾತನಾಡಿ, ಬರಪೀಡಿತ ಜಗಳೂರಿನಲ್ಲಿ ಅಮರ ಭಾರತಿ ಶಿಕ್ಷಣ ಸಂಸ್ಥೆ ಆಲದ ಮರದಂತೆ ಬೆಳೆದಿದೆ. ಡಾ.ಟಿ.ತಿಪ್ಪೇಸ್ವಾಮಿ ಅವರ ದೂರ ದೃಷ್ಟಿಯಿಂದ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯೆ ದಾಸೋಹ ಪಡೆದಿದ್ದಾರೆ ಎಂದು ಸ್ಮರಿಸಿದರು.ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಟಿ.ಮಧು ಮಾತನಾಡಿದರು. ಕಾರ್ಯಕ್ರಮದಲ್ಲಿ ಭದ್ರಾ ಮೇಲ್ದಂಡೆ ಹೋರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ, ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಂಭುಲಿಂಗಪ್ಪ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬಿ.ಪಿ.ಸುಭಾನ್ ಮತ್ತು ಕೃಷಿಯಲ್ಲಿ ಸಾಧನೆ ಮಾಡಿದ ಜಮ್ಮಾಪುರ ಗ್ರಾಮದ ಬಿ.ಆರ್.ರಂಗಪ್ಪ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಿ.ಡಾ.ಟಿ.ತಿಪ್ಪೇಸ್ವಾಮಿ ಪತ್ನಿ ಅನ್ನಪೂರ್ಣಮ್ಮ, ಆಡಳಿತಾಧಿಕಾರಿ ಶ್ವೇತಾ ಮಧು, ಪ್ರಾಂಶುಪಾಲರಾದ ಸಿ.ತಿಪ್ಪೇಸ್ವಾಮಿ, ಎಸ್.ಆರ್.ಕಲ್ಲೇಶ್, ಕೆ.ಮಹೇಶ್, ಉಪನ್ಯಾಸಕರಾದ ಬಿಎನ್ಎಂ ಸ್ವಾಮಿ, ಜಿ.ಟಿ.ಬಾಲರಾಜ್, ರಾಜೇಶ್ ಜೈನ್, ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಸೇರಿದಂತೆ ಅನೇಕರು ಇದ್ದರು.