ಸುದ್ದಿವಿಜಯ, ಜಗಳೂರು: ಖಾಸಗಿ ಶಾಲೆಗಳ ಹಾವಳಿ ಮಧ್ಯೆ ಅಸ್ಥಿತ್ವ ಉಳಿಸಿಕೊಂಡಿರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ದಿನೇ ದಿನೇ ಹೆಚ್ಚುತ್ತಿರುವುದು ಸಂತೋಷ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈ.ಹಾಲಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶುಕ್ರವಾರ ಶೈಕ್ಷಣಿಕ ವರ್ಷದ ಕೊನೆಯ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಳ್ಳಿ ಹಳ್ಳಿಗಳಿಗೂ ಖಾಸಗಿ ಶಾಲೆಗಳ ಬಸ್ಗಳು ಬಂದು ಮಕ್ಕಳನ್ನು ಆಕರ್ಷಿಸುತ್ತಿವೆ. ಆದರೆ ಸರಕಾರಿ ಶಾಲೆಗಳಲ್ಲಿ ಸರಕಾರ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಶೂ ಸಾಕ್ಸ್, ಹಾಲು, ಮೊಟ್ಟೆ ಹೀಗೆ ಅನೇಕ ಸೌಲಭ್ಯಗಳನ್ನು ಕೊಡಲಾಗುತ್ತಿದೆ. ಕಟ್ಟಿಗೆಹಳ್ಳಿ ಸರಕಾರಿ ಶಾಲೆಯ ವಾತಾವರಣ ನೋಡಿದರೆ ಮಲೆನಾಡ ಶಾಲೆ ಅನುಭವವಾಗುತ್ತದೆ.
ಗುಣಮಟ್ಟದ ಶಿಕ್ಷಣದ ಜೊತೆಗೆ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಸ್ಮಾಟ್ ಕ್ಲಾಸ್ ಶಿಕ್ಷಣ ದೊರೆಯುತ್ತಿದೆ. ಇದಕ್ಕೆ ಕಾರಣ ಗ್ರಾಮಸ್ಥರ ಸಹಕಾರ ಮತ್ತು ಶಿಕ್ಷಕರ ಬದ್ಧತೆಯೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕ ಕೂಬಾನಾಯ್ಕ್ ಮಾತನಾಡಿ, ಗ್ರಾಮದಲ್ಲಿ ಸೌಹಾರ್ದತೆಯಿದೆ. ಶಾಲೆಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಬಸವರಾಜ್ ಅವರು ಮಕ್ಕಳ ಕ್ಷೇಮಾಭಿವೃದ್ಧಿ ಮತ್ತು ಮೂಲಸೌಕರ್ಯ ಒದಗಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ.ಶಾಲೆ ಮಕ್ಕಳಿಗೆ ಶೌಚಾಲಯ ನಿರ್ಮಾಣಕ್ಕೆ ಜಾಗ ಇಲ್ಲವೆಂದು ಗ್ರಾಮದ ಗೌಡರಾದ ಕೆ.ಜಿ.ಕರಿಬಸವನಗೌಡರನ್ನು ಕೇಳಿಕೊಂಡ ತಕ್ಷಣ ಉಚಿತವಾಗಿ ನಿವೇಶ ನೀಡಿದರು.
ಹೀಗಾಗಿ ಇಲ್ಲಿ ಸರಕಾರ 5.10 ಲಕ್ಷ ರೂ ವೆಚ್ಚದಲ್ಲಿ ಶೌಚಾಲಯ ಮತ್ತು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಬಂದಿದ್ದು ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಿ.ಡಿ.ಹಾಲಪ್ಪ, ಸಿಆರ್ಪಿ ರಾಜಶೇಖರ್, ಟಿಪಿಒ ಸುರೇಶ್ರೆಡ್ಡಿ, ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಅಂಜನಿನಾಯ್ಕ್, ಇಸಿಒ ಬಸವರಾಜ್, ಶಿಕ್ಷಕರ ಸಂಘದ ಉಪಾಧ್ಯಕ್ಷ ದೊಡ್ಡಪ್ಪ,
ಶಿಕ್ಷಕರಾದ ಮಲ್ಲೇಶಪ್ಪ, ಗೊಂದ್ಯಪ್ಪ, ಮಂಜುಳ, ಪ್ರತಿಭಾ, ಎಸ್ಡಿಎಂಸಿ ಅಧ್ಯಕ್ಷರಾದ ಶಿವಕುಮಾರ್, ಉಪಾಧ್ಯಕ್ಷ ಬಸವರಾಜ್, ಎನ್.ಎಸ್.ಸೋಮನಗೌಡ, ಮಂಜಪ್ಪ ಸೇರಿದಂತೆ ಅನೇಕರು ಇದ್ದರು.