ಸುದ್ದಿವಿಜಯ,ಜಗಳೂರು: ಬಲಹೀನರಿಗೆ ಸರಕಾರವೇ ಮನೆ ಬಾಗಿಲಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಿಂದ ಗ್ರಾಮೀಣ ಭಾಗದ ಕಟ್ಟಕಡೆಯ ಜನರಿಗೆ ತಲುಪಿಸುವ ಮೂಲಕ ಗ್ರಾಮಾಭಿವೃದ್ಧಿಗೆ ನಮ್ಮ ಸರಕಾರ ಒತ್ತು ಕೊಡುತ್ತಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ತಾಲೂಕಿನ ಗಡಿಗ್ರಾಮ ಅಣಬೂರಿನಲ್ಲಿ ಶನಿವಾರ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ಯೋಜನೆಗಳು ಬರುತ್ತಿವೆ. ಆದರೆ ಗ್ರಾಮೀಣ ಜನರಿಗೆ ಅವು ತಲುಪುತ್ತಿಲ್ಲ. ಹೀಗಾಗಿ ನಮ್ಮ ಸರಕಾರ ಗ್ರಾಮವಾಸ್ತವ್ಯದ ಮೂಲಕ ಮನೆ ಬಾಗಿಲಿಗೆ ಯೋಜನೆಗಳು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಗ್ರಾಮೀಣ ಜನರಿಗೆ ಬೇಕಾಗುವ ಚರಂಡಿ, ವಸತಿ, ರಸ್ತೆ, ಶುದ್ದ ಕುಡಿಯುವ ನೀರು, ಶಾಲಾ ಕೊಠಡಿ, ವೃದ್ಧಾಪ್ಯವೇತನ, ವಿದವಾ ವೇತನ, ಅಂಗವಿಕಲರ ಮಾಸಾಶನ ವಂಚಿತ ನಾಗರಿಕರಿಗೆ ತಲುಪಿಸುವುದೇ ಗ್ರಾಮವಾಸ್ತವ್ಯದ ಆಶಯವಾಗಿದೆ ಎಂದರು.
ಬಿಜೆಪಿ ಸರಕಾರದಲ್ಲಿ ನಾಡು ಸುಭೀಕ್ಷೆ:
ರಾಜ್ಯದಲ್ಲಿ ಬಿಜೆಪಿ ಸರಕಾರ ಆಳಿತಕ್ಕೆ ಬಂದ ಮೇಲೆ ನಾಲ್ಕು ವರ್ಷಗಳಿಂದ ಸತತ ಮಳೆಯಾಗುತ್ತಿದೆ. ಬರದ ತಾಲೂಕು ಎಂಬ ಹಣೆಪಟ್ಟಿ ಕಳಚುವ ಉದ್ದೇಶದಿಂದ 57 ಕೆರೆಗಳಿಗೆ ನೀರು ತುಂಬಿಸುವ ತುಂಗಭದ್ರಾ ಏತನೀರಾವರಿ ಯೋಜನೆ ಮತ್ತು ಭದ್ರಾ ಮೇಲ್ದೆಂಡೆ ಯೋಜನೆಗಳ ಸಹಕಾರಿಯಾಗಲಿವೆ.
ಭದ್ರಾ ಯೋಜನೆ ನನ್ನ ಕನಸಿನ ಯೋಜನೆ ಈ ಭಾಗಕ್ಕೆ ನೀರು ಹರಿಸಿಯೇ ಸಿದ್ದ. ನಿಮ್ಮ ಋಣ ಭಾರ ನನ್ನ ಮೇಲಿದ್ದು ಅದನ್ನು ಹತ್ತು ಜನ್ಮ ಬಂದರೂ ತೀರಿಸಲು ಆಗುವುದಿಲ್ಲ. ಸರಕಾರ ಬಡವರಿಗೆ 75 ಯೂನಿಟ್ ವಿದ್ಯುತ್ ನೀಡುತ್ತಿದೆ. ಅಲೆಮಾರಿಗಳಿಗೆ ಶಾಶ್ವತ ಸೂರಿಗಾಗಿ 1743 ಮನೆಗಳು ಸೇರಿ ವಿವಿಧ ಯೀಜನೆಗಳ ಅಡಿ ಒಟ್ಟು 3600ಕ್ಕೂ ಹೆಚ್ಚು ಮನೆಗಳನ್ನು ನೀಡಿದ್ದೇವೆ ಎಂದು ಹೇಳಿದರು.
ಕಟ್ಟಡ ಕಡೆಯ ವ್ಯಕ್ತಿಗೆ ಸೌಲಭ್ಯ:
ತಾಪಂ ಇಓ ಲಕ್ಷ್ಮೀಪತಿ ಮಾತನಾಡಿ, 2000ನೇ ಇಸವಿಯಲ್ಲಿ ಆಗಿನ ಜಿಲ್ಲಾಧಿಕಾರಿ ಶಿವರಾಂ ಅವರು ಆರಂಭಿಸಿದ ಗ್ರಾಮವಾಸ್ತವ್ಯ ಇಂದಿನ ಸರಕಾರದಲ್ಲಿ ಪರಿಣಾಮಕಾರಿಯಾಗಿ ಜನರಿಗೆ ನೆರವಾಗತ್ತಿದೆ. ಸರಕಾರದ ಸವಲತ್ತು ಕಟ್ಟ ಕಡೆಯ ವ್ಯಕ್ತಿಗೆ ತಲುಪಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ನರೇಗಾ ಯೋಜನೆಯಿಂದ ಪರಿಣಾಮಕಾರಿಯಾಗಿ ಕೆಲಸಗಳಾಗಿವೆ. ಎಸ್ಬಿಎಂ, ಬಸವ ವಸತಿ, ಅಂಬೇಡ್ಕರ್ ಸೇರಿ ವಿವಿಧ ಯೋಜನೆಗಳಲ್ಲಿ ಒಟ್ಟು 3000 ಸಾವಿರ ಮನೆಗಳನ್ನು ತಾಲೂಕಿಗೆ ನೀಡಲಾಗಿದೆ ಎಂದರು.
ಸಾರ್ವಜನಿಕರ ಸಮಸ್ಯೆಗಳಿಗೆ ನೇರ ಪರಿಹಾರ:
ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಮಾತನಾಡಿ, ಅಣಬೂರು ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ ಈ ಗ್ರಾಮವನ್ನೇ ಆಯ್ಕೆ ಮಾಡಿಕೊಂಡು ಇಲ್ಲಿಯ ಜನರ ಬವಣೆಗಳಿಗೆ ನಮ್ಮ ಸರಕಾರ ನೇರವಾಗಿ ಫಲಾನುವಿಗಳಿಗೆ ಯೋಜನೆಗಳು ತಲುಪಿಸಲು ಸಿದ್ದವಾಗಿದೆ.
ಈ ಗ್ರಾಮದಲ್ಲಿ ಒಟ್ಟು 39 ಅರ್ಜಿಗಳು ಬಂದಿದ್ದು, ಕದಾಯ ಇಲಾಖೆಗೆ 9, ಪಂಚಾಯಿತ್ ರಾಜ್ 18, ಕೆಇಬಿ 3, ಅರಣ್ಯ 2, ಕೆಎಸ್ಆರ್ಟಿಸಿ 1, ಪಶುಇಲಾಖೆ1, ಲೋಕೋಪಯೋಗಿ 1 ಅರ್ಜಿಗಳು ಬಂದಿದು ತಕ್ಷಣವೇ ಅರ್ಜಿದಾರರ ಸಮಸ್ಯೆಗಳಿಗೆ ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ ಎಂದರು.
ಗ್ರಾಮವಾಸ್ತವ್ಯದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಕೃಷಿ ಇಲಾಖೆಯ ಎಡಿಎ ಮಿಥುನ್ ಕೀಮಾವತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ಪಶುವೈದ್ಯಕೀಯ ಇಲಾಖೆಯ ಲಿಂಗರಾಜ್, ರೇಷ್ಮೆ ಇಲಾಖೆಯ ಅಧಿಕಾರಿ ಕೊಟ್ರೇಶ್, ಗ್ರಾಪಂ ಅಧ್ಯಕ್ಷರಾದ ಕವಿತಾ ರೇಣುಕೇಶ್, ಉಪಾಧ್ಯಕ್ಷರಾದ ಸಣ್ಣನಾಗಮ್ಮ, ನಿರಂಜನ್ಗೌಡ, ಶಿವಮೂರ್ತಿ ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಕರಡಿ ಹಾವಳಿಗೆ ರೈತರ ಆಕ್ರೋಶ!
ಶಾಸಕ ರಾಮಚಂದ್ರ ಮಾತನಾಡುವಾಗ ಹಗಲುವೇಳೆ ಕರಡಿ ದಾಳಿ ಆಗ್ತಿವೆ ಅರಣ್ಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ವೇದಿಕೆಯ ಮೇಲೆಯೇ ಡಿಎಫ್ಓ ಕರೆ ಮಾಡಿದ ಶಾಸಕರು ನಾಳೆಯೇ ಕರಡಿ ನಿಯಂತ್ರಣಕ್ಕೆ ತಂಡ ರಚಿಸಿ, ಅಲ್ಲಲ್ಲಿ ಕಬ್ಬಿಣದ ಬೋನುಗಳನ್ನು ಇರಿಸಿ, ಪಠಾಕಿ ಹಚ್ಚಿ ಚದುರಿಸುವ ವ್ಯವಸ್ಥೆ ಮಾಡಿ. ಜನರ ಪ್ರಾಣಕ್ಕೆ ಆಪತ್ತು ತಂದರೆ ನಾನು ಸುಮ್ಮನಿರಲ್ಲ ಎಂದು ಎಚ್ಚರಿಸಿದರು.
ರಾತ್ರಿ ಬದಲಿಗೆ ಬೆಳಗಿನ ವೇಳೆ ವಿದ್ಯುತ್ ಕೊಡಿ !
ಕರಡಿದಾಳಿಯಿಂದ ರಾತ್ರಿ ಹೊತ್ತು ಹೊಲಕ್ಕೆ ಹೋಗಲು ಆಗ್ತಿಲ್ಲ ರಾತ್ರಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಸುವ ಬದಲು ಹಗಲು ನೀಡಿ ಎಂದು ಕೇಳಿದರೂ ಬೆಸ್ಕಾಂ ಎಇಇ ಬೇಜಾವಾಬ್ದಾರಿ ವರ್ತಿಸುತ್ತಿದ್ದಾರೆ ಎಂದು ರೈತರು ಸಿಡಿಮಿಡಿಗೊಂಡರು. ಆಗ ಶಾಸಕ ವೇದಿಕೆ ಮೇಲೆ ಕರೆಸಿ ರಾತ್ರಿ ಬದಲಿಗೆ ಬೆಳಗಿನ ವೇಳೆ ವಿದ್ಯುತ್ ಕೊಡಿ ಎಂದು ಸೂಚಿಸಿದರು.
ಚರಂಡಿ ಗಬ್ಬೆದ್ದು ನಾರುತ್ತಿದೆ ಸ್ವಾಮಿ !
ಸ್ವಾಮಿ ನಮ್ಮ ಮನೆಯ ಮುಂದೆ ಚರಂಡಿ ಗಬ್ಬೆದ್ದು ನಾರುತ್ತಿದೆ. ಗ್ರಾಪಂ ಅಧಿಕಾರಿಗಳು ತಲೆ ಹಾಕುತ್ತಿಲ್ಲ ಎಂದು ಮಹಿಳೆಯರು ವೇದಿಕೆ ಹತ್ತಿ ಶಾಸಕರಿಗೆ ಮನವಿ ಸಲ್ಲಿಸಿದರು. ಚರಂಡಿ ಸ್ವಚ್ಛತೆ ಮಾಡಿಸಿ ಎಂದು ಅಧಿಕಾರಿಗಳಿಗೆ ಶಾಸಕರ ರಾಮಚಂದ್ರ ಸೂಚಿಸಿದರು.