suddivijaya20/05/2024
ವರದಿ: ಜಗಜೀವನ್ ರಾಂ, ಶಿವಲಿಂಗಪ್ಪ
ಸುದ್ದಿವಿಜಯ, ವಿಶೇಷ: ಜಗಳೂರು: ಮೂಲತಃ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ 40ಕ್ಕೂ ಹೆಚ್ಚು ಕುಟುಂಬಗಳು ತಾಲೂಕಿನ ಜಮ್ಮಾಪುರ ಕೆರೆಯಲ್ಲಿ ಬೀಡುಬಿಟ್ಟಿವೆ. ಸಣ್ಣ ಸಣ್ಣ ಗುಡಿಸಲುಗಳೊಂದಿಗೆ ಟೆಂಟ್ ಹಾಕಿರುವ ಕಾರ್ಮಿಕ ಕುಟುಂಬಗಳಿಗೆ ಒಬ್ಬ ಯಜಮಾನನಿದ್ದು ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದಾನೆ.
ಹೌದು, ಸುಮಾರು 10 ಹಳ್ಳಿಗಳಿಗೆ ನೀರಿನ ಮೂಲವಾಗಿರುವ ಜಮ್ಮಾಪುರ ಕೆರೆ ತಾಲೂಕಿನ ಅತ್ಯಂದ ದೊಡ್ಡ ಕೆರೆಗಳಲ್ಲಿ ಒಂದು. ಕಳೆದ ವರ್ಷ ಮಳೆಯಿಲ್ಲದ ಕಾರಣ ನೀರು ಇಲ್ಲದೇ ಒಣಗಿ ನಿಂತಿದೆ. ಅದರಲ್ಲಿ ಜಾಲಿ ಗಿಡಗಳು ಬೆಳೆದಿವೆ.
ಬೆಳೆದಿರುವ ಜಾಲಿಗಿಡಗಳ ಪೊದೆಯ ಮಧ್ಯೆ ಮಹಾರಾಷ್ಟ್ರ ಮೂಲದ ಆದಿವಾಸಿಗಳು ನೆಲೆಸಿದ್ದು, ಇದ್ದಿಲು ತಯಾರಿಕೆಯಲ್ಲಿ ತೊಡಗಿದ್ದಾರೆ.
40 ಕುಟುಂಬಗಳು ಇಲ್ಲಿಗೆ ಆಗಮಿಸಿದ್ದು, ಕಳೆದ ಎರಡು ತಿಂಗಳಿಂದ ಇಲ್ಲಿಯೇ ವಾಸವಾಗಿದ್ದಾರೆ. ಇವರು ದೊಡ್ಡ ದೊಡ್ಡ ಜಾಲಿ ಮರಗಳನ್ನು ಬೇರು ಸಮೇತ ಅಗೆದು, ಇದ್ದಿಲು ತಯಾರಿಸುತ್ತಿದ್ದಾರೆ. ನಂತರ ದೂರದ ಊರುಗಳಿಗೆ ಮಾರಾಟ ಮಾಡುವ ಕಾಯಕ ನೆಚ್ಚಿದ್ದಾರೆ.
ಆದಿವಾಸಿಗಳು: ಕಾತ್ಕರ್ ಎನ್ನುವ ಆದಿವಾಸಿ ಗುಂಪಿಗೆ ಸೇರಿರುವ ಕಾರ್ಮಿಕರು, ಹಗಲೆಲ್ಲ ಗಿಡಗಳ ಬೇರು ತೆಗೆಯುತ್ತಾರೆ. ರಾತ್ರಿ ಇಡೀ ಕುಟುಂಬಗಳು ಇಲ್ಲಿಯೇ ವಾಸಿಸುತ್ತಾರೆ.
ಬೆಳಗ್ಗೆ ಎದ್ದ ತಕ್ಷಣ ಜಾಲಿಗಿಡಗಳ ಬೇರು ಅಗೆದು, ಒಂದೆಡೆ ಕೂಡಿ ಹಾಕುತ್ತಾರೆ. ಇದರ ಮೇಲೆ ಮಣ್ಣು ಹಾಕಿ ಬೆಂಕಿ ಹಚ್ಚುತ್ತಾರೆ. ಇಡೀ ಬೇರುಗಳು ಸುಟ್ಟು ಇದ್ದಿಲು ಉತ್ಪಾದನೆಯಾಗುತ್ತದೆ.
ಸ್ಥಳೀಯರ ಆಕೋಶ: ಬೃಹತ್ ಪ್ರಮಾಣದಲ್ಲಿ ಇದ್ದಿಲು ಸುಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಕಾರ್ಬನ್ ಡೈಯಾಕ್ಸೈಡ್ ಪ್ರಕೃತಿಗೆ ಸೇರಿ ಪರಿಸರ ಮಲೀನವಾಗುತ್ತದೆ.
ತಾಲೂಕಿನ ಅನೇಕ ಹಳ್ಳಿಗಳಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದೆ. ಈ ಭಾಗದಲ್ಲಿ ಮಳೆಯಾಗುತ್ತಿಲ್ಲ. ಇದಕ್ಕೆ ಕಾರಣ ನೂರಾರು ಬೃಹತ್ ಜಾಲಿ ಗಿಡದ ಇದ್ದಿಲು ಬಟ್ಟಿಗಳನ್ನು ಸುಟ್ಟಿರುವದರಿಂದ ಪರಿಸರ ಹಾಳಾಗಿ ಹೋಗಿರುವುದೇ ಮಳೆ ಮಾಯವಾಗಿರುವುದಕ್ಕೆ ಕಾರಣ ಎಂದು ಅರಿಶಿಣಗುಂಡಿ ಗ್ರಾಮದ ಸಿ.ಬಿ.ವೆಂಕಟೇಶ್ ಮತ್ತು ಸಿದ್ದನಗೌಡ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಲೀಕನಿಂದ ಕಾರ್ಮಿಕರಿಗೆ ಹಿಂಸೆ:
ಇದ್ದಿಲು ಸುಡಲು ಮಹಾರಾಷ್ಟ್ರದಿಂದ 40 ಕುಟುಂಬಗಳನ್ನು ಕರೆತಂದಿರುವ ಸಂತೋಷ್ ರಾಥೋಡ್ ಎನ್ನುವ ವ್ಯಕ್ತಿ ಕಾರ್ಮಿಕರಿಗೆ ಹಿಂಸಿಸುತ್ತಿದ್ದಾನೆ.
ಮಕ್ಕಳು ಮರಿಗಳೊಂದಿಗೆ ಬಿಡಾರ ಹೂಡಿರುವ ಕುಟುಂಬಗಳನ್ನು ನಿರ್ಜನ ಪ್ರದೇಶದಲ್ಲಿ ಆಹಾರ, ಶುದ್ಧ ನೀರು ಮೂಲ ಸೌಕರ್ಯಗಳಿಲ್ಲದೇ ನೀಗ್ರೋಗಳಂತೆ ನೋಡಿಕೊಳ್ಳುತ್ತಿದ್ದಾನೆ ಎಂದು ಕಾರ್ಮಿಕರೇ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಲಿ ಹಣ ಕೇಳಿದರೆ ಸಂತೋಷ್ ರಾಥೋಡ್ ಹಲ್ಲೆ ಮಾಡುತ್ತಾನೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಲಕ್ಷಾಂತರ ರೂ ವಹಿವಾಟು: ಆದಿವಾಸಿಗಳು ನಿತ್ಯ ರಾಶಿ ರಾಶಿ ಬೇರುಗಳನ್ನು ಸುಟ್ಟು ಇದ್ದಿಲು ತಯಾರಿಸುತ್ತಾರೆ. ಹೀಗೆ ತಯಾರಿಸಿದ ಇದ್ದಿಲುಗಳನ್ನು ಮಳೆಗೆ ತೋಯದಂತೆ ಚೀಲದಲ್ಲಿ ತುಂಬಿಟ್ಟು ಒಂದೆಡೆ ಸಂಗ್ರಹಿಸುತ್ತಾರೆ.
ಇವರು ನಿತ್ಯ ತಯಾರಿಸುವ ಇದ್ದಿಲು ಮುಂಬಯಿ ಮೂಲದ ನಾನಾ ಕಂಪನಿಗಳು ಖರೀದಿಸುತ್ತವೆ. 1 ಚೀಲ ಇದ್ದಲಿಗೆ 1500 ರೂ.ನಂತೆ ಮಾರಾಟ ಮಾಡಲಾಗುತ್ತದೆ. ವಾರಕ್ಕೆ 200 ರಿಂದ 300 ಚೀಲ ಇದ್ದಿಲು ತಯಾರಿಸುತ್ತಾರೆ.
ಗಿಡಗಳ ಬೊಡ್ಡೆಗಳನ್ನು ಬಿಟ್ಟು, ಉಳಿದ ಕಟ್ಟಿಗೆಗಳನ್ನು ಅಲ್ಲಿಯೇ ಬಿಟ್ಟಿರುವದರಿಂದ ಕೆರೆಯಲ್ಲಾ ಮುಳ್ಳಿನ ಮಂಟಪವಾದಂತಾಗಿದೆ.
ಅಧಿಕಾರಿಗಳು ಇತ್ತ ಕಡೆ ತಿರುಗಿಯೂ ನೋಡಿಲ್ಲ:
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತ ಕಡೆ ತಿರುಗಿಯೂ ನೋಡಿಲ್ಲ. ಜಲಮೂಲವಾಗಿರುವ ಈ ಕೆರೆಯಲ್ಲಿ ಹೊರ ರಾಜ್ಯಗಳಿಂದ ಬಂದು ಜಾಲಿಗಡಿಗಳ ಬೊಡ್ಡೆ ಸುಟ್ಟು ಪರಿಸರ ಹಾಳು ಮಾಡುತ್ತಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಒಳ ಪಡುವ ಈ ಕೆರೆ ಈಗ ಇದ್ದಿಲು ಮತ್ತು ಮಣ್ಣು ತೆಗೆದು ಮಾರಾಟ ಮಾಡುವ ಅಕ್ರಮ ಆರ್ಥಿಕ ತಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ತಕ್ಷಣವೇ ಈ ದಂಧೆ ನಿಲ್ಲಿಸಿ:
ಜಮ್ಮಾಪುರ ಕೆರೆಯಲ್ಲಿ ಇದ್ದಿಲು ಸುಡುವುದರಿಂದ ಮಳೆ ಬರುತ್ತಿಲ್ಲ. ಸುತ್ತಲೂ ಮಳೆಯಾಗುತ್ತಿದೆ ಆದರೆ ನಾಲ್ಕೈದು ಗ್ರಾಮಗಳಿಗೆ ಮಳೆಯಾಗುತ್ತಿಲ್ಲ.
ತಕ್ಷಣವೇ ಈ ದಂಧೆ ನಿಲ್ಲಿಸಿ ಎಂದು ಅರಿಶಿಣಗುಂಡಿ ಗ್ರಾಮದ ಅನೇಕ ರೈತರು ಭಾನುವಾರ ಕೆರೆಗೆ ಭೇಟಿ ಕೊಟ್ಟು ಮಾಲೀಕ ಸಂತೋಷ್ ರಾಥೋಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಿದರು.