suddivijayanews18/06/2024
ಸುದ್ದಿವಿಜಯ, ಜಗಳೂರು: ತಾಲೂಕಿನಲ್ಲಿ ವಿಂಡ್ ಫ್ಯಾನ್‍ಗಳು ಹೆಚ್ಚು ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಭೂ ಪರಿವರ್ತನೆ ಮಾಡುವುದು, ಅದರೊಳಗೆ ನಡುವೆ ಚಟುವಟಿಕೆಗಳನ್ನು ನಿಯಂತ್ರಣ ಮಾಡುವ ಸಂಪೂರ್ಣ ಅಧಿಕಾರ ಕಂದಾಯ ಇಲಾಖೆಗೆ ಇರುತ್ತದೆ.
ದೂರುಗಳನ್ನು ಪಡೆದು ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್ ಕಲೀಂ ವುಲ್ಲಾ ಅವರಿಗೆ ಜಿಪಂ ಸಿಇಒ ಸುರೇಶ್ ಇಟ್ನಾಳ್ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಶಾಸಕ ಬಿ. ದೇವೇಂದ್ರಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪವನ ವಿದ್ಯುತ್ ಸ್ಥಾವರಗಳ ಅಳವಡಿಕೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು. ಇದುವರೆಗೂ ಎಷ್ಟು ವಿಂಡ್ ಫ್ಯಾನ್‍ಗಳನ್ನು ಅಳವಡಿಸಲಾಗಿದೆ ಎಂಬುದರ ಬಗ್ಗೆ ಗೂಗಲ್ ತೆಗೆದುಕೊಂಡು ತೆರಿಗೆ ವಸೂಲಿ ಮಾಡಲಾಗುವುದು ಎಂದರು.
ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ಸುಮಾರು 10 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಜಿ.ಪಂ ಸಿಇಒ ಸುರೇಶ್ ಇಟ್ನಾಳ್ ಹೇಳಿದರು.
ನರೇಗಾ ಯೋಜನೆಯಡಿ ಕೇವಲ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ ಎಂಬ ಅಪಸ್ವರ ಕೇಳಿ ಬಂದಿದೆ. ಹಾಗಾಗಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಹಾಗೂ ಕೂಲಿಕಾರರಿಗೆ ಕೂಲಿ ಕೊಡಲು ಒತ್ತು ನೀಡಲಾಗುವುದು, ಇದರಲ್ಲಿ ಶೇ.40 ಪ್ರತಿಶತ ಸಾಮಾಗ್ರಿ ವೆಚ್ಚ ಮಾಡಲು ಅವಕಾಶವಿದೆ ಎಂದರು.ಜಗಳೂರು ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅಧ್ಯಕ್ಷತೆ ಮಾತನಾಡಿದರು.
2024-25 ನೇ ಸಾಲಿನಲ್ಲಿ 174 ಗ್ರಾವೆಲ್ ಹಾಗೂ ಸಿಸಿ ರಸ್ತೆಗಳ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ 98 ಕಾಮಗಾರಿಗಳು ಅಂದಾಜುಪಟ್ಟಿ ತಯಾರಾಗಿದ್ದು ಕೆಲಸ ಆರಂಭಿಸಲಾಗುತ್ತಿದೆ. ಉಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲಾಗುವುದು.
112 ಚರಂಡಿಗಳ ಕಾಮಗಾರಿಗಳನ್ನು ಮಾಡಲಾಗುವುದು, ಇದರಲ್ಲಿ 58 ಕ್ರಿಯಾಯೋಜನೆ ಸಿದ್ದವಾಗಿದೆ ಎಂದರು.
ನರೇಗಾ ಯೋಜನೆಯಡಿ ಪ್ರತಿ ವರ್ಷ ಪ್ರತಿ ದಿನ 13ಸಾವಿರ ಕೂಲಿಕಾರರು ಕೆಲಸ ಮಾಡುತ್ತಿದ್ದರು. ಆದರೆ ಈ ವರ್ಷ 26 ಸಾವಿರದವರೆಗೂ ಕೂಲಿಕಾರರ ಕೆಲಸ ಮಾಡುತ್ತಿದ್ದಾರೆ.
ಜೂನ್ ತಿಂಗಳ ಗುರಿ ಸಾಧನೆಯಾಗಿದೆ. ಈಗ ಪ್ರತಿ ಕೂಲಿಕಾರರಿಗೆ 349 ರೂ ನಿಯಮಿತವಾಗಿ ಪಾವತಿ ಮಾಡಲಾಗುತ್ತಿದೆ ಎಂದರು.
ತಾಲೂಕಿನ ಸೊಕ್ಕೆ ಮತ್ತು ಕೆಚ್ಚೇನಹಳ್ಳಿ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಪ್ರಾಯೋಗಿಕವಾಗಿ ಬದು ನೀರು ನಿರ್ವಹಣೆಗೆ ಯೋಜನೆಯ ಆಯುಕ್ತರ ಅನುಮೋದನೆಗೆ ಹೋಗಿದೆ.
ರಾಜ್ಯ ಮಟ್ಟದಲ್ಲೂ ತಾಂತ್ರಿಕ ಸಹಕಾರ ಕೊಡುತ್ತಿದ್ದಾರೆ. ಈ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಚರಂಡಿ ನಿರ್ಮಾಣ ಮಾಡಲಾಗುತ್ತದೆ. ಶಾಲೆಯ ಅಭಿವೃದ್ದಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.
ಇದರಲ್ಲಿ ಶಾಲಾ ಕಾಂಪೌಂಡ್ 60, ಶೌಚಗೃಹ 75, ಅಡುಗೆ ಕೋಣೆ 23, ಆಟದ ಮೈದಾನ 47 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಇ-ಸ್ವತ್ತು ವಿಚಾರವಾಗಿ ಸಾಕಷ್ಟು ನಮಗೆ ಸಾಕಷ್ಟು ದೂರುಗಳು ಬಂದಿವೆ, ಈಗ ಸರ್ವೇಯಾಗಿ ಪಿಡಿಒ ಲಾಗಿನ್‍ಗೆ ವಾಪಸ್ಸು ಬಂದಿರುವುದು ನಮ್ಮಗೆ ಜಿಲ್ಲೆಯಲ್ಲಿ 30 ಇವೆ.
ಇದರಲ್ಲಿ ಜಗಳೂರಿನ 7 ಇವೆ, ಉಳಿದವು ಬೇರೆ ತಾಲೂಕಿನಿಂದ ಬಂದಿವೆ. ಆದರೆ ಸರ್ವೇ ಹಂತದಲ್ಲಿ ತಡವಾಗುವುದರಿಂದ ಸಮಸ್ಯೆಯಾಗುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ದಿಶಾಂಕ್ ಯ್ಯಾಪ್ ಬಳಿಸಿಕೊಂಡು ಸರ್ವೇಗೆ ಹೋಗದೇ ಪಂಚಾಯಿತಿಗಳಲ್ಲಿ ಮಾಡಿಕೊಡಲು ಸಿದ್ದತೆ ಮಾಡುತ್ತಿದೆ ಯಶಸ್ವಿಯಾದರೆ ರಾಜ್ಯದ ಎಲ್ಲ ಕಡೆ ಮಾಡಲಾಗುತ್ತದೆ ಎಂದರು.
ಆಹಾರ ಪದಾರ್ಥ ಪರಿಶೀಲನೆ:
ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಬೆಲ್ಲ, ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಆಹಾರ ಪದಾರ್ಥಗಳ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದು ಸ್ಯಾಂಪಲ್‍ಗಳನ್ನು ತರಿಸಿ ಪರೀಕ್ಷೆ ಮಾಡಿಸಿ ವರದಿ ನೀಡುವಂತೆ ಸೂಚನೆ ನೀಡಲಾಗುವುದು.
ಮಕ್ಕಳ ಅಪೌಷ್ಠಿಕತೆ ನೀಗಿಸುವ ಉದ್ದೇಶದಿಂದ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ, ಇದರ ನಿರ್ವಹಣೆ ಹೊತ್ತಿರುವ ಗುತ್ತಿಗೆದಾರರು ಜವಾಬ್ದಾರಿವಹಿಸಬೇಕು ಎಂದು ಸಿಇಒ ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಚುರುಕುಗೊಳ್ಳಬೇಕು:
ಅಧಿವೇಶನ, ಚುನಾವಣೆ ನೀತಿ ಸಂಹಿತೆ ಸೇರಿದಂತೆ ಇತರೆ ಕೆಲಸಗಳಿಗೆ ಒಂದು ವರ್ಷ ಕಳೆದು ಹೋಗಿದೆ. ಉಳಿದ ನಾಲ್ಕು ವರ್ಷಗಳಲ್ಲಿ ಕ್ಷೇತ್ರ ಅಭಿವೃದ್ದಿಗೆ ಒತ್ತು ನೀಡಬೇಕು.
ಹಾಗಾಗಿ ಬೇಜವಾಬ್ದಾರಿ ಮರೆತು ಚುರುಕಾಗಿ ಕೆಲಸ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಪ್ರತಿ ಹಳ್ಳಿಗೂ ಶುದ್ದವಾದ ನೀರು ಪೂರೈಕೆ ಮಾಡಬಹುದು, 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಶೀಘ್ರವೇ 33 ಕೆರೆಗಳಿಗೆ ನೀರು ತುಂಬಲಿದೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಮೂರು ಯೋಜನೆಗಳಿಂದ ಜಗಳೂರಿನ ಚಿತ್ರಣವೇ ಬದಲಾಗಲಿದೆ ಎಂದರು.