suddivijayanews21/06/2024
ಸುದ್ದಿವಿಜಯ, ಜಗಳೂರು: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ರಾಜ್ಯದ ಮೂಲೆ ಮೂಲೆಗಳಲ್ಲೂ ಆಚರಿಸಲಾಗುತ್ತಿದೆ.
ತಾಲೂಕಿನ ಗೋಗುದ್ದು ಸರಕಾರಿ ಶಾಲೆಯ ಮಕ್ಕಳಿಗೆ ಇಲ್ಲಿನ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಹಾಗೂ ಎಸ್ಡಿಎಂಸಿ ವತಿಯಿಂದ ಶುಕ್ರವಾರ ವಿಭಿನ್ನವಾಗಿ ಯೋಗದ ಮಹತ್ವವ ನ್ನು ಪ್ರಕೃತಿ ಜತೆ ನಡೆಸಿದ್ದು ವಿಶೇಷವಾಗಿತ್ತು.
ಹೌದು, ಮೂಲಸೌಕರ್ಯಗಳಲ್ಲಿ ಅತ್ಯಂತ ಹಿಂದುಳಿದ ಗೋಗುದ್ದು ಗ್ರಾಮದಲ್ಲಿರುವ ಸರಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಕರ ಪರಿಶ್ರಮದಿಂದ ಸ್ವಾಸ್ಥ ಸಮಾಜ ನಿರ್ಮಾಣ, ಮಾನಸ ಚಿಕಿತ್ಸೆ,
ಭ್ರಾತೃತ್ವದ ಬೆಸೆಯುವ ಉದ್ದೇಶದಿಂದ ಗ್ರಾಮದಿಂದ ಒಂದು ಕಿಮೀ ದೂರ ಕರೆದೊಯ್ದು ಪ್ರಕೃತಿ ಜತೆ ಯೋಗ ಮಾಡಿಸಿದ್ದು ವಿಭಿನ್ನವೆನ್ನಿಸಿತು.
ಯೋಗವನ್ನು ಯಾವುದೇ ಒಂದು ಪಕ್ಷ, ಸಮುದಾಯ, ಸಿದ್ಧಾಂತಕ್ಕೆ ಸೀಮಿತಗೊಳಿಸಿ ನೋಡುವ ಸಂಕುಚಿತ ಮನೋಭಾವ ದೂರಮಾಡುವ ಉದ್ದೇಶದಿಂದ ಮುಖ್ಯಶಿಕ್ಷಕ ಕುಬೇಂದ್ರಪ್ಪ ಮತ್ತು ಸಹ ಶಿಕ್ಷಕರು ಹೊಸ ವಿಭಿನ್ನ ಆಲೋಚನೆ ಉದ್ದೇಶದಿಂದ ನಿರ್ಮಾಣ ಹಂತದ ಪವನ ವಿದ್ಯುತ್ ಸ್ಥಾವರದ ಕೆಳಗೆ ಪ್ರಕೃತಿ ಜತೆ ಯೋಗ ಮಾಡಿಸಿದರು.
ತಾಡಾಸನ, ವೃಕ್ಷಾಸನ, ಉತ್ತಿಥ ಹಸ್ತಪಾದಾಸನ, ತ್ರಿಕೋನಾಸನ, ವೀರಭದ್ರಾಸನ, ಉತ್ಕಟಾಸನ, ಮಾರ್ಜರಿ ಆಸನ, ಅಧೋಮುಖಶ್ವಾನಾಸನ, ಭುಜಂಗಾಸನ, ಧನುರಾಸನ,
ಸೇತುಬಂಧಾಸನ, ಸಲಂಬ ಸವಾಂಗಾಸನ, ಅರ್ಧ ಮತ್ಸ್ಯೇಂದ್ರಿಯಾಸನ, ಪಶ್ಚಿಮೋತ್ತಾಸನ, ದಂಡಾಸನ, ಸೂರ್ಯ ನಮಸ್ಕಾರ, ಅಂಜಲಿ ಮುದ್ರ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡಿಸಲಾಯಿತು.
ಪ್ರತಿ ನಿತ್ಯ ಯೋಗ ಮಾಡುವುದರಿಂದ ಶಾರೀರಿಕ ಮತ್ತು ಮಾನಸಿಕವಾಗಿ ದೇಹ ಸದೃಢವಾಗುತ್ತದೆ. ಯೋಗ ಮತ್ತು ಆಯುರ್ವೇದ ನಡುವೆ ನಿಕಟ ಸಂಬಂಧವಿದೆ.ಯೋಗ ಮನಸ್ಸು, ದೇಹ ಮತ್ತು ಆತ್ಮವನ್ನು ಒಂದು ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಮಕ್ಕಳು ಸಮಯ ಪಾಲನೆ ಮಾಡಬೇಕು.
ಎಂದು ಮುಖ್ಯ ಶಿಕ್ಷಕ ಕುಬೇಂದ್ರಪ್ಪ ಮಕ್ಕಳಿಗೆ ಸ್ಪೂರ್ತಿ ತುಂಬಿದರು. ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ಮಕ್ಕಳು, ಪೋಷಕರು ಭಾಗವಹಿಸುತ್ತಿರುವುದು ಖುಷಿಯ ವಿಚಾರ ಎಂದರು.
ಸ್ವಯಂ ಸೇವಕರು ಸಾಥ್
ಸರಕಾರಿ ಶಾಲೆಯ ಎಲ್ಲ ಮಕ್ಕಳು ಶುಕ್ರವಾರ ಬೆಳಗ್ಗೆ 7 ಗಂಟೆಗೆ ನೀರು ಮತ್ತು ಯೋಗ ಮ್ಯಾಟ್ನೊಂದಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಶಿಕ್ಷಕರ ಮಾರ್ಗದರ್ಶನದಂತೆ ಎಲ್ಲ ಮಕ್ಕಳು ಯೋಗ ಕಲಿಸು ಗ್ರಾಮದ ಸ್ವಯಂ ಸೇವಕರಾದ ಮಮತಾ ಮತ್ತು ಆರ್.ಸಾಹಿಲ್ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.
ಜೊತೆಗೆ ಎಸ್ಡಿಎಂಸಿ ಸದಸ್ಯರಾದ ದಾದಾವಲ್ಲಿ, ರಹಮತ್ವುಲ್ಲ, ಕಾಸಿಂಸಾಬ್, ಪರಶುರಾಮ, ನಾಗೇಂದ್ರ ಭಾಗಿಯಾಗಿದ್ದರು.