suddivijayanews24/06/2024
ಸುದ್ದಿವಿಜಯ, ಜಗಳೂರು: ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ವರ್ಷದ ಮೊದಲ ಹಬ್ಬವಾಗಿ ಆಚರಿಸುವ ಕಾರ ಹುಣ್ಣಿಮೆ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಎತ್ತುಗಳಿಗೆ ಮೈತೊಳೆದು ರೈತರಿ ಕರಿ ಹರಿಯುವ ಎತ್ತುಗಳ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ವಿವಿಧ ಸಾಮಗ್ರಿಗಳಾದ ಕುಂಟೆ, ಕೂರಿಗೆ, ಬಾರಕೋಲು, ಎಡೆ ಕುಂಟೆ ಮುಂತಾದ ವಸ್ತುಗಳನ್ನು ಪೂಜಿಸುತ್ತಾರೆ. ಎತ್ತುಗಳಿಗೆ ಊಟದ ಜೋಳವನ್ನು ಬೇಯಿಸಿ ಅನ್ನವಾಗಿ ತಿನ್ನಿಸಲಾಗುತ್ತದೆ.
ಕರಿ ಹರಿಯುವ ವಿಶೇಷತೆ: ಕಾರ ಹುಣ್ಣಿಮೆ ದಿನದಂದು ಸಂಜೆಯಾಗುತ್ತಿದ್ದಂತೆ ಊರಿನ ಕರಿಗಲ್ಲು ಅಗಸಿಯಲ್ಲಿ ಬೇವಿನ ತಪ್ಪಲಿನ ತೋರಣ ಕಟ್ಟಿ ಬಿಳಿ ಬಣ್ಣದ ಎತ್ತುಗಳನ್ನು ಇದರಲ್ಲಿ ಕರೆತಂದು ಬಿತ್ತನೆ ಬೀಜಗಳಾದ ಮೆಕ್ಕೆಜೋಳ, ಹತ್ತಿ, ಎಲ್ಲಾ ತರಹದ ದ್ವಿದಳ ಧಾನ್ಯಗನ್ನು ಒಂದು ಕುಂಬದಲ್ಲಿ ಹಾಕಿ ಊರಿನ ತಳವಾರನಿಂದ ಪೂಜೆ ಸಲ್ಲಿಸಿದ ನಂತರ ಕುಂಬಕ್ಕೆ ಎಡೆ ಕುಂಟೆ ಹೊಡೆಯಲಾಗುತ್ತದೆ.
ಅದೇ ಸಂದರ್ಭದಲ್ಲಿ ಎತ್ತುಗಳನ್ನು ತಮಟೆ, ಸಮಾಳ ಮತ್ತು ಮೇಳಗಳನ್ನು ಊದಿ ಘಾಸಿಗೊಳಿಸಿ ಊರಿನ ಒಳಗಡೆ ಬಿಡಲಾಗುತ್ತದೆ. ಎಡೆ ಹೊಡೆದಾಗ ಯಾವ ಬಿತ್ತನೆ ಬೀಜ ಮುಂದೆ ಬರುತ್ತದೋ ಆ ಬಿತ್ತನೆ ಬೀಜ ಈ ವರ್ಷದ ಇಳುವರಿ ಕೊಡುವ ಬೆಳೆಯಾಗಿ ರೈತರು ಪ್ರಧಾನವಾಗಿ ಬಿತ್ತನೆ ಮಾಡಬಹುದು ಎಂಬ ಧಾರ್ಮಿಕ ನಂಬಿಕೆಯಾಗಿದೆ.
ಪ್ರತಿ ವರ್ಷ ಇದೇ ರೀತಿ ಕಾರ ಹಬ್ಬ ಆಚರಿಸಲಾಗುತ್ತದೆ. ಸುತ್ತಮುತ್ತಲ ಗ್ರಾಮಗಳಾದ ಅರಿಶಿಣಗುಂಡಿ, ತೋರಣಗಟ್ಟೆ, ನಿಬಗೂರು ಸೇರಿದಂತೆ ವಿವಿಧ ಗ್ರಾಮಗಳ ಜನರು ಕಟ್ಟಿಗೆಹಳ್ಳಿ ಕಾರ ಹಬ್ಬದಲ್ಲಿ ಮುನ್ನುಗ್ಗಿದ ಬಿತ್ತನೆ ಬೀಜವನ್ನು ನೋಡಿಕೊಂಡು ಬಿತ್ತನೆ ಮಾಡುತ್ತಾರೆ.ಈ ವರ್ಷ ಕೊತ್ತಂಬರಿ ಮತ್ತು ಈರುಳ್ಳಿ ಬಿತ್ತನೆ ಮಾಡಿದರೆ ಹೆಚ್ಚು ಇಳುವರಿ ಬರುತ್ತದೆ ಎಂಬ ಮುನ್ಸೂಚನೆ ಸಿಕ್ಕಿದೆ.
ಕರಿ ಹರಿಯುವ ಸಂದರ್ಭದಲ್ಲಿ ಕೆ.ಎಂ.ಬಸವರಾಜಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಮಂಜುನಾಥ್, ರಾಜು, ಬಸವಪ್ರಭು ಸೇರಿದಂತೆ ಗ್ರಾಮದ ನೂರಾರು ಮಂದಿ ಭಾಗವಹಿಸಿದ್ದರು.