suddivijayanews26/06/2024
ಸುದ್ದಿವಿಜಯ, ಜಗಳೂರು: ‘ಪುತ್ರ ಶೋಕಂ ನಿರಂತರ’ ಎಂಬ ಶ್ಲೋಕದ ಅರ್ಥ ಜನ್ಮ ಕೊಟ್ಟ ತಾಯಿ ತಂದೆ ಕಣ್ಣೆದುರೇ ಮಕ್ಕಳು ದುಶ್ಚಟಕ್ಕೆ ಬಲಿಯಾಗಿ ಮೃತಪಟ್ಟರೆ ಆ ಕೊರಗು ಪೋಷಕರಿಗೆ ಜನ್ಮ ಪೂರ್ತಿ ಇರುತ್ತದೆ.
ಹೀಗಾಗಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ (Against Drug Abuse and Illicit Trafficking) ಬಲಿಯಾಗಬೇಡಿ ಎಂದು ಇನ್ಸ್ಪೆಕ್ಟರ್ ಡಿ.ಶ್ರೀನಿವಾಸ್ ರಾವ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ದಾವಣಗೆರೆ ಜಿಲ್ಲಾ ಪೊಲೀಸ್ ಮತ್ತು ಜಗಳೂರು ಪೊಲೀಸ್ ಠಾಣೆ ಆಶ್ರಯದಲ್ಲಿ ಮಹತ್ಮ ಗಾಂಧಿ ವೃತ್ತದಿಂದ ಸರಕಾರಿ ಪಿಯು ಕಾಲೇಜಿನವರೆಗೆ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ನಂತರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೋಚಿ ಬೋರಯ್ಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮದ್ಯಪಾನ, ಧೂಮ ಪಾನದಂತಹ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾದರೆ ಅದರಿಂದ ಹೊರ ಬರುವುದು ತುಂಬಾ ಕಷ್ಟ.
ತಂಬಾಕು ಟ್ರಗ್ಸ್, ಗಾಂಜ, ಅಫೀಮು ಮತ್ತಿತರ ಮಾದಕ ವಸ್ತುಗಳಿಗೆ ಬಲಿಯಾದರೆ ಜೀವನವೇ ಸರ್ವನಾಶವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ 17-18 ವರ್ಷ ವಯೋಮಾನದ ವ್ಯಸನಕ್ಕೆ ತುತ್ತಾಗುತ್ತಿರುವುದು ನಿಜಕ್ಕೂ ದುರಂತ. ಭಾರತದಲ್ಲಿ ಮೂರು ಕೋಟಿಗೂ ಅಧಿಕ ಮಂದಿ ಮಾದಕ ವ್ಯವಸನದಿಂದ ಹೊರ ಬರಲು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲವರಿಗೆ ವ್ಯಸನದಿಂದ ಹೊರ ಬರಲು ಚಿಕಿತ್ಸೆ ಪಡೆಯಬೇಕು ಎಂಬ ಅರಿವು ಇಲ್ಲ. ಕಳೆದ 10 ವರ್ಷಗಳಲಿ ಶೇ.70 ರಷ್ಟು ಗಾಂಜಾ ಸೇವನೆ ಹೆಚ್ಚಾಗಿದೆ.
ನಿಮ್ಮ ಗ್ರಾಮಗಳಲ್ಲಿ ಯಾರಾದರೂ ಅಕ್ರಮವಾಗಿ ಗಾಂಜಾ ಬೆಳೆಯುವುದು, ಮಾರಾಟ ಮಾಡುವುದು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದರು.
ನಿಮ್ಮ ಮನೆಯಲ್ಲಿ ನಿಮ್ಮ ತಂದೆ, ಚಿಕ್ಕಪ್ಪ, ಅಣ್ಣ, ತಮ್ಮ ಯಾರಾದರೂ ಬೀಡಿ, ಸಿಗರೇಟು ಸೇದುತ್ತಿದ್ದರೆ ಅವರಿಗೆ ಮನಸ್ಸಿಗೆ ನೋವಾದರೂ ಪರವಾಗಿಲ್ಲ ನೇರವಾಗಿ ಹೇಳಿ.
ನಿಮ್ಮ ಈ ಚಟ ಇಡೀ ಕುಟುಂಬಕ್ಕೆ ಭಾರವಾಗಬಹುದು. ನಿಮ್ಮನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಕ್ಕೆ ಆಧಾರವಾಗಿರುವ ವ್ಯಕ್ತಿ ಮೃತಪಟ್ಟರೆ ಆಗುವ ನಷ್ಟ ನಾವೆಲ್ಲಾ ಜೀವನ ಪೂರ್ತಿ ವ್ಯಥೆ ಪಡಬೇಕಾಗುತ್ತದೆ.
ಮರದ ಬೇರು ಗಟ್ಟಿಯಾಗಿದ್ದರಷ್ಟೇ ಇಡೀ ಕುಟುಂಬ ಆರ್ಥಿಕವಾಗಿ, ಸಾಮಾಜಿಕವಾಗಿ, ಆರೋಗ್ಯಕರವಾಗಿರಲು ಸಾಧ್ಯ. ಕೆಟ್ಟ ಚಟಗಳನ್ನು ಬಿಟ್ಟು ಬಿಡಿ ಎಂದು ತಿಳಿ ಹೇಳಿ ಚಟ ಬಿಡಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಮಾದಕ ವ್ಯವಸನಕ್ಕೆ ಬಲಿಯಾಗುವುದಿಲ್ಲ. ನಾನು ದುಶ್ಚಟಗಳಿಗೆ ದಾಸನಾಗುವುದಿಲ್ಲ ಎಂದು ಇನ್ಸ್ಪೆಕ್ಟರ್ ಶ್ರೀನಿವಾಸ್ರಾವ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪಿಯು ಕಾಲೇಜು ಉಪನ್ಯಾಸಕರಾದ ಬಿ.ಕೆ.ಮಂಜುನಾಥ್, ಮೈಲಾರ್ರಾವ್, ಹೊನೋರು ಭಾಷಾ, ಜಿಎಸ್.ಸ್ವಪ್ನಾ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಂಗಪ್ಪ,
ಡಾ.ರಾಜೇಶ್ವರಿ, ವೆಂಕಟೇಶ್, ಹೋ.ಚಿ. ಬೋರಯ್ಯ ಕಾಲೇಜು ಪ್ರಾಂಶುಪಾಲ ಪ್ರೊ.ಸೀತಾರಾಂ, ಪಿಎಸ್ಐ ಎಸ್.ಡಿ.ಸಾಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.