ಸುದ್ದಿವಿಜಯ,ಜಗಳೂರು:ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಬುಧವಾರ ಷಡಕ್ಷರಿ ಮುನಿ ಮಹಾಸ್ವಾಮಿಗಳ ಆದಿ ಜಾಂಬವ ಗುರುಪೀಠವ ಶಿಷ್ಯ ವರ್ಗ ನೇತೃತ್ವದಲ್ಲಿ ವಿವಿಧ ದಲಿತಪರ ಸಂಘಟನೆಗಳು ಬುಧವಾರ ಜಗಳೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ಇಲ್ಲಿನ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಹಳೆ ಮಹಾತ್ಮ ಗಾಂಧಿ ವೃತ್ತ, ದಾವಣಗೆರೆ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಜಿ.ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
2005-06ರಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಅವರ ನೇತೃತ್ವದಲ್ಲಿ ಮೀಸಲಾತಿ ವರ್ಗೀಕರಣ ಸಮೀತಿಯನ್ನು ರಚಿಸಿ ರಾಜ್ಯಾಧ್ಯಂತ ಪರಿಶಿಷ್ಠ ಜಾತಿಗಳ ಸಂಖ್ಯೆ ಆಧಾರಿತವಾಗಿ ವರದಿಯನ್ನು ಸಿದ್ದಪಡಿಸಿ2011-12ನೇ ಸಾಲಿನಲ್ಲಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ವರದಿಯಂತೆ ಮೂಲ ಅಸ್ಪೃಶ್ಯರಾದ ಮಾದಿಗ ಸಮಾಜಕ್ಕೆ ಶೇ 6, ಹೊಲಯ ಸಮಾಜಕ್ಕೆ ಶೇ.5, ಸ್ಪೃಶ್ಯ ಸಮುದಾಯಕ್ಕೆ ಶೇ.3, ,ಇತರೆ ಶೇ1 ಮೀಸಲಾತಿ ನೀಡಲು ವರದಿಯಲ್ಲಿ ಸೂಚಿಸಲಾಗಿತ್ತು.
ಮೀಸಲಾತಿ ಅನುಷ್ಠಾನಗೊಳಿಸಲು ರಾಜ್ಯಾದ್ಯಂತ ಅನೇಕ ಹೋರಾಟ, ಪ್ರತಿಭಟನೆ, ಮುಷ್ಕರ, ರಸ್ತೆ ತಡೆ ನಡೆಸಿದರು ಏನು ಪ್ರಯೋಜನವಾಗಿಲ್ಲ.
ಮಾದಿಗ ಸಮುದಾಯ ಒಳ ಮೀಸಲಾತಿಗಾಗಿ ಸುಮಾರು 30 ವರ್ಷಗಳಿಂದಲೂ ಹೋರಾಟ, ಪ್ರತಿಭಟನೆ ನಡೆಸುತ್ತಾ ಬಂದಿದೆ ಆದರೆ ಈವರೆಗೂ ಯಾವ ಸರ್ಕಾರಗಳು ಬೇಡಿಕೆ ಬೇಡಿಕೆ ಈಡೇರಿಸಲು ಮೀನಾಮೇಷ ತೋರುತ್ತಿದ್ದಾರೆ ಎಂದು ದೂರಿದರು.
ನ್ಯಾ.ಸದಾಶಿವ ಆಯೋಗದ ವರದಿಗೆ ಕಾಂಗ್ರೆಸ್ ,ಜೆಡಿಎಸ್, ಬಿಜೆಪಿ ಸರ್ಕಾರಗಳು ಸಮಾಜಕ್ಕೆ ತುಂಬ ಅನ್ಯಾಯ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗ ಸಮುದಾಯ ವೋಟಿಗೆ ಸೀಮಿತ:
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರು ಮೀಸಲಾತಿ ವಿಚಾರದಲ್ಲಿ ಮಾದಿಗ ಸಮುದಾಯಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ, ಇನ್ನು ಗುಲಾಮರಾಗಿಯೇ ಬದುಕುತ್ತಿದ್ದೇವೆ. ನಮ್ಮನ್ನಾಳಿದ ಸರ್ವ ಪಕ್ಷಗಳು ಕೇವಲ ಓಟಿಗಾಗಿಯೇ ನಮ್ಮ ಸಮುದಾಯವನ್ನು ಬಳಿಸಿಕೊಂಡಿದ್ದಾರೆ. ಸದಾಶಿವ ಆಯೋಗ ವರದಿಯನ್ನು ಅನುಷ್ಠಾನಗೊಳಿಸಲು ಒಬ್ಬರ ಮೇಲೋಬ್ಬರು ಜೂಟ್ ಹೇಳುತ್ತಾ ಅಧಿಕಾರ ನಡೆಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸದೇ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಹಿರಿಯ ಮುಖಂಡ ಜಿ.ಎಚ್ ಶಂಭುಲಿಂಗಪ್ಪ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಹಿರಿಯ ಮುಖಂಡರಾದ ಗ್ಯಾಸ್ ಓಬಣ್ಣ, ಹಟ್ಟಿ ತಿಪ್ಪೇಸ್ವಾಮಿ,ದಸಂಸ ಸಂಚಾಲಕ ಮಾಚಿಕೆರೆ ಸತೀಶ್, ಭರಸಮುದ್ರ ಮಲ್ಲೇಶ್, ಶಿವಪ್ಪ, ಬೈರನಾಯಕನಹಳ್ಳಿ ಚಂದ್ರಪ್ಪ, ವಿಜಯ್ ಕೆಂಚೋಳ್, ಅಣಬೂರು ರಾಜಶೇಖರ್, ರುದ್ರೇಶ್, ಪಲ್ಲಾಗಟ್ಟೆ ರವಿಕುಮಾರ್, ಶಿವಕುಮಾರ್, ಸಂದೀಪ್, ಬಿ.ಆರ್ ರವಿಚಂದ್ರ ಸೇರಿದಂತೆ ಮತ್ತಿತರಿದ್ದರು.