ಸುದ್ದಿವಿಜಯ, ಜಗಳೂರು: ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪದೇ ಪದೇ ಶಾಸಕ ರಾಮಚಂದ್ರ ಅವರನ್ನು ಪ್ರಚಾರಪ್ರಿಯ, ಸುಳ್ಳುಗಾರ, ಮೋಜುಗಾರ ಎಂಬ ಪದ ಬಳಸುವ ಮೂಲಕ ಟೀಕಿಸುವುದು ಸಮಂಜಸವಲ್ಲ ಎಂದು ಬಿಜೆಪಿ ಜಿಲ್ಲಾ ಎಸ್‍ಟಿ ಮೋರ್ಚಾದ ಕಾರ್ಯದರ್ಶಿ ಬಿದರಕೆರೆ ರವಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗೆ ಅಗೌರವ ಸೂಚಿಸುವುದು ಸರಿಯಲ್ಲ.
ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕರು ಕಾರ್ಯಕ್ರಮದಲ್ಲಿ 57 ಕೆರೆಗೆ ತುಂಬಿಸುವ ಯೋಜನೆ ತಂದಿದ್ದು ನಮ್ಮ ಸರಕಾರ. ನಾನೇ ರುವಾರಿ ಎಂದು ಫ್ಲಕ್ಸ್, ಬ್ಯಾರ್‍ಗಳಲ್ಲಿ ಹಾಕಿಕೊಂಡು ಸುಳ್ಳು ಹೇಳಿದ್ದಾರೆ.
ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‍ನಲ್ಲಿ 42 ಕೆರೆ ತುಂಬಿಸಲು 250 ಕೋಟಿ ಮೀಸಲಿಟ್ಟರು. ಆದರೆ ಡಿಪಿಆರ್‍ಗೆ ಕೇವಲ 15 ಕೋಟಿರೂ ಅಷ್ಟೇ ಮೀಸಲಿಟ್ಟರು.
ನಂತರ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಒಟ್ಟು 57 ಕೆರೆಗಳನ್ನು ಪಟ್ಟಿಯಲ್ಲಿ ಸೇರಿಸಿ ಒಟ್ಟಾರೆ 665 ಕೋಟಿ ಹಣ ಮಂಜೂರು ಮಾಡಿದರು. ಭದ್ರಾಮೇಲ್ದಂಡೆ ಯೋಜನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಮಾಜಿ ಶಾಸಕರು ನಮ್ಮ ಸರಕಾರದ ಯೋಜನೆ ಎಂದು ಹೇಳುತ್ತಿದ್ದಾರೆ. ಈ ಯೋಜನೆಗೆ ಮೂರು ಜನ ಮುಖ್ಯಮಂತ್ರಿಗಳ ಕೊಡುಗೆ ಇದೆ ಎಂದರು.
ಕ್ಷೇತ್ರದಲ್ಲಿ ಗಂಗಾಕಲ್ಯಾಣ ಯೋಜನೆ ಅಡಿ ಕ್ಷೇತ್ರದಲ್ಲಿ 400 ಬೋರ್‍ವೆಲ್ ಮಂಜೂರಾಗಿದೆ, ವಾಲ್ಮೀಕಿ ಸಮುದಾಯದ ಅಧ್ಯಕ್ಷರಾದ ಎಸ್.ವಿ.ರಾಮಚಂದ್ರ 15.93 ಕೋಟಿ ಹಣ ಬಿಡುಗಡೆ ಮಾಡಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಮಾಜಿ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಏನು ಎಂಬುದು ಪಟ್ಟಿ ತೋರಿಸಲಿ. ನಮ್ಮ ಸರಕಾರದ ಅಭಿವೃದ್ಧಿಗಳನ್ನು ನಾವು ಜನರ ಮುಂದಿಡುತ್ತೇವೆ. ಪದೇ ಪದೇ ಶಾಸಕರ ವಿರುದ್ಧ ಅಸವಿಧಾನಿಕ ಪದ ಬಳಸುವುದು ಶೋಭೆ ತರುವಂತದ್ದಲ್ಲ ಎಂದರು.
ಮಾಜಿ ಶಾಸಕರ ಕೊಡುಗೆ ಏನು?
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್ ಮಾತನಾಡಿ, ಪಕ್ಕದ ಕ್ಷೇತ್ರಕ್ಕೆ ತುಂಗಭದ್ರಾ ಡ್ಯಾಂ ಹಿನ್ನೀರು ಹರಿಸುವ ಕುಡಿಯುವ ನೀರಿನ ಪೈಪ್‍ಲೈನ್ ಯೋಜನೆ ನಮ್ಮ ಕ್ಷೇತ್ರದ ಕೋಗಳತೆ ದೂರದಲ್ಲೇ ಹಾದುಹೋಗಿದೆ ಆಗ ಶಾಸಕರಾಗಿದ್ದ ಎಚ್.ಪಿ.ರಾಜೇಶ್ ಅವರು ನಮ್ಮ ಕ್ಷೇತ್ರಕ್ಕೆ ಏಕೆ ಯೋಜನೆ ಸೇರಿಸಲಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಮಂಡಲ್ ಅಧ್ಯಕ್ಷ ಎಚ್.ಸಿ.ಮಹೇಶ್ ಮಾತನಾಡಿ, ವೈಯಕ್ತಿಕವಾಗಿ ಯಾರೂ ಯಾರನ್ನೂ ದೂಷಣೆ ಮಾಡಬಾರದು. ಕ್ಷೇತ್ರದ ಅಭಿವೃದ್ಧಿಗೆ ಸಲಹೆ ಕೊಟ್ಟರೆ ಅದನ್ನು ಸ್ವೀಕರಿಸಬೇಕು. ವೈಯಕ್ತಿಕವಾಗಿ ಯಾರೂ ಯಾರನ್ನೂ ದ್ವೇಷಿಸಬಾರದು. ರಾಜಕೀಯವಾಗಿ ಟೀಕೆ ಮಾಡಲಿ ಅದನ್ನು ವೈಯಕ್ತಿಯ ತೇಜೋವಧೆ ಮಾಡಬಾರದು ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಎಚ್.ನಾಗರಾಜ್, ಎಸ್.ಕೆ.ಮಂಜುನಾಥ್, ಸಿ.ವಿ. ನಾಗಪ್ಪ,ಶಿವಕುಮಾರ್ ಸ್ವಾಮಿ, ನಿಜಲಿಂಗಪ್ಪ, ಪಪಂ ಅಧ್ಯಕ್ಷ ರೇವಣಸಿದ್ದಪ್ಪ, ಶಿವಣ್ಣ, ಕಾನನಕಟ್ಟೆ ತಿಪ್ಪೇಸ್ವಾಮಿ, ಓಬಳೇಶ್, ಪಲ್ಲಾಗಟ್ಟೆ ಚನ್ನಪ್ಪ, ದೇವರಾಜ್, ಕಾನನಕಟ್ಟೆ ಪ್ರಭು, ಕಲ್ಲೇದೇವರಪುರ ಮಹೇಶ್, ಬಸವನಕೋಟೆ ನಾಗೇಂದ್ರಪ್ಪ, ಹನುಮಂತಪ್ಪ, ಎಂಎಲ್‍ಎ ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.