suddivijayanews13/07/2024
ಸುದ್ದಿವಿಜಯ, ಜಗಳೂರು: ಶನಿವಾರ ಎಸ್‍ಎಸ್ ಲೇಔಟ್‍ನಲ್ಲಿ 4.33 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಯೋಜನೆ ಬಗ್ಗೆ ಮಾಹಿತಿ ನೀಡಲು ತಡವರಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ADSWD )ಮಂಜುನಾಥ್ ಅವರಿಗೆ ಶಾಸಕ ಬಿ.ದೇವೇಂದ್ರಪ್ಪ ಕ್ಲಾಸ್ ತೆಗೆದುಕೊಂಡರು.
ಕಾಮಗಾರಿಯ ಮಾಹಿತಿ ನೀಡಬೇಕಾದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್ ತಡಬಡಿಸಿದರು. ಅಷ್ಟೇ ಅಲ್ಲ ಇತ್ತೀಚೆಗೆ ಫ.ಗು.ಹಳಕಟ್ಟಿ ಜಯಂತಿಯನ್ನು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಮಾಡಿಲ್ಲ. ಅಗೌರವ ತೋರಿಸಲಾಗಿದೆ ಎಂದು ಪತ್ರಕರ್ತರು ಶಾಸಕರ ಗಮನಕ್ಕೆ ತಂದರು.
ಸಿಟ್ಟಿಗೆದ್ದ ಶಾಸಕ ಬಿ.ದೇವೇಂದ್ರಪ್ಪ ‘ಏನಪ್ಪಾ ನಿನ್ನ ಹೆಸರು, ಎಷ್ಟು ದಿನ ಆಯ್ತು ಇಲ್ಲಿಗೆ ಬಂದು. ಫ.ಗು.ಹಳಕಟ್ಟಿ ಯಾರು ಗೊತ್ತಾ? ಅವರು ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರ್ರಿ’? ಸ್ವಲ್ಪ ಮಾಹಿತಿ ನೀಡಿ ಎಂದಾಗ ಫ.ಗು.ಹಳಕಟ್ಟಿ ಬಗ್ಗೆ ಅಷ್ಟೊಂದು ಮಾಹಿತಿ ನನಗೆ ಇಲ್ಲ ಸಾರ್. ನನಗೆ ಗೊತ್ತಿಲ್ಲ ಸಾರ್ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ತಡಬಡಿಸಿದರು.
ಆಗ ಶಾಸಕರು ‘ಶಹಭಾಷ್’ ಗೊತ್ತಿಲ್ಲ ಅಂದ್ರಲ್ಲ ಹೇಗೆ? ಫ.ಗು.ಹಳಕಟ್ಟಿ ಬಗ್ಗೆ ತಿಳಿದುಕೊಳ್ಳಿ. ನೀವು ತಿಳಿದುಕೊಳ್ಳಬೇಕಲ್ವಾ. ನೀವು ಡೆಮೋದಲ್ಲಿ ಹೇಗೆ ಪಾಸ್ ಆಗಿ ಇಲ್ಲಿಗೆ ಬಂದ್ರಿ ಎಂದು ಪ್ರಶ್ನಿಸಿದರು.
ಆಗ ಪತ್ರಕರ್ತರು, ಮಂಜುನಾಥ್ ಸರಿಯಾಗಿ ಕಚೇರಿಗೆ ಬರಲ್ಲ. ಇಲಾಖೆಯಲ್ಲಿ ಇರಲ್ಲ. ಹಾಸ್ಟೆಲ್ ಸ್ವಚ್ಛತೆಯಿಲ್ಲ. ಕಾರ್ಯನಿರ್ವಹಿಸುವ ಕೆಲಸಗಾರರನ್ನು ಏಕಾ ಏಕಿ ತಗೆಯುತ್ತಾರೆ ಎಂದು ಶಾಸಕರಿಗೆ ದೂರಿದರು.
ಸಮಾಜ ಕಲ್ಯಾಣ ಇಲಾಖೆ ಡಿಡಿ ನಾಗರಾಜ್ ಸಮಸ್ಯೆಗಳು ಇವೆ ಎಂದು ಗಮನಕ್ಕೆ ತಂದರೂ ಫೋನ್ ರಿಸೀವ್ ಮಾಡಲ್ಲ. ಸ್ಪಂದನೆ ಇಲ್ಲ ಎಂದು ದೂರಿದರು. ಆಗ ಶಾಸಕರು, ಏಕಾ ಏಕಿ ಗುತ್ತಿಗೆ ಆಧಾರಿತ ನೌಕರರನ್ನು ಕೆಲಸದಿಂದ ತೆಗೆಯುವಂತಿಲ್ಲ. ಸೋಮವಾರದಿಂದ ಇವರನ್ನು ಕೆಲಸಕ್ಕೆ ನೇಮಿಸಿಕೊಳ್ಳಿ. ಮಂಜುನಾಥ್ ನೀವು ಶಿಸ್ತಿನಿಂದ ಕೆಲಸ ಮಾಡಿ ಎಂದು ಸೂಚಿಸಿದರು