suddivijayanews20/07/2024
ಸುದ್ದಿವಿಜಯ, ಜಗಳೂರು: ದಾವಣಗೆರೆ ನೂತನ ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರ್ ಸ್ವಾಮಿ ಶನಿವಾರ ದಿಢೀರ್ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪ್ರತಿ ಕೊಠಡಿಗಳ ಆಡಳಿತ ವ್ಯವಸ್ಥೆಯನ್ನು ಪರಿಶೀಲಿಸಿದರು.
ಬೆಳಿಗ್ಗೆ 1.30ಕ್ಕೆ ಸರಿಯಾಗಿ ಭೇಟಿ ನೀಡಿದ ಅವರು, ತಹಶೀಲ್ದಾರ್ ಕಚೇರಿ, ಭೂಮಿ ಕೇಂದ್ರ, ಆರ್‍ಆರ್‍ಟಿ ವಿಭಾಗ, ಎಜಿಎಸ್‍ಕೆ, ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ವೆ ಕಚೇರಿ, ದಾಖಲೆಗಳ ವಿಭಾಗ, ಆಹಾರ ಶಾಖೆ, ಚುನಾವಣಾ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರ್ ಸ್ವಾಮಿ, 15 ದಿನಗಳಿಂದಷ್ಟೇ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದಿದ್ದೇನೆ. ತಾಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡುವುದು ಸಾಮಾನ್ಯ.
ಜಗಳೂರು ತಾಲೂಕಿನ 8 ಗ್ರಾಪಂಗಳಲ್ಲಿ ಫಸಲ್ ಬಿಮಾ ಯೋಜನೆ ಬಂದಿಲ್ಲ ಎಂದು ಕೆಲ ರೈತರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಶೀಘ್ರವೇ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದರು.ಜಿಲ್ಲೆಯ ಅನೇಕ ಕಡೆ ಬರ ಪರಿಹಾರ ಹಣ ಬಂದಿಲ್ಲ ಎಂಬ ದೂರು ಸಹ ಬಂದಿದೆ. ಅಷ್ಟೇ ಅಲ್ಲ ಪೂರ್ವ ಮುಂಗಾರು ಸುರಿದ ಪರಿಣಾಮ ತೋಟಗಾರಿಕೆ ಬೆಳೆಗಳ ನಷ್ಟದ ಬಗ್ಗೆ ಮಾಹಿತಿ ಇದೆ.
ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಶೀಘ್ರವೇ ಎನ್‍ಡಿಆರ್‍ಎಫ್ ನಿಯಮಗಳ ಅನುಸಾರ ಪರಿಹಾರ ವಿತರಣೆಗೆ ಸೂಚನೆ ನೀಡಲಾಗುವುದು ಎಂದರು.
ಸಕಾಲದಲ್ಲಿ ಪರಿಹಾರ ಒದಗಿಸಿ
ತಹಶೀಲ್ದಾರ್ ಕಚೇರಿಗೆ ನಿತ್ಯ ಸಾವಿರಾರು ಜನ ಸಮಸ್ಯೆಗಳನ್ನು ಹೊತ್ತು ಬರುತ್ತಾರೆ. ಅವರ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ಒದಗಿಸಬೇಕು. ಏನೇ ಸಮಸ್ಯೆಗಳು ಬಂದರು ತಹಶೀಲ್ದಾರ್ ಶೀಘ್ರವೇ ಪರಿಹಾರ ಕಲ್ಪಿಸುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.ಕಚೇರಿಯ ಸ್ವಚ್ಛತೆ, ಸಾರ್ವಜನಿಕ ಕುಂದು ಕೊರತೆಗಳನ್ನು ಬಗೆ ಹರಿಸಬೇಕು ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಗ್ರೇಡ್-2 ತಹಶೀಲ್ದಾರ್ ಮಂಜಾನಂದ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.