suddivijayanews24/07/2024
ಸುದ್ದಿವಿಜಯ, ಜಗಳೂರು: ಪಟ್ಟಣದ ಹೋ.ಚಿ.ಬೋರಯ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಇಂಗ್ಲಿಷ್ ಉಪನ್ಯಾಸಕ ಪ್ರೊ.ಜೆ.ಎ.ಸೀತಾರಾಂ(57) ಬುಧವಾರ ನಿಧನರಾದ ಹಿನ್ನೆಲೆ ಮಹಾತ್ಮ ಗಾಂಧಿ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಿದ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ನುಡಿನಮನ ಸಲ್ಲಿಸಿದರು.
ಹೊ.ಚಿ.ಬೋರಯ್ಯ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ.ಚಂದ್ರಶೇಖರ್ ಮಾತನಾಡಿ, 1997 ರಿಂದಲೂ ಪ್ರೊ.ಸೀತಾರಾಂ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಬರ ಪೀಡಿತ ಜಗಳೂರು ತಾಲೂಕಿನಲ್ಲಿ ಇದ್ದ ಏಕೈಕ ಪದವಿ ಕಾಲೇಜು ಎಂದರೆ ಅದು ಹೋ.ಚಿ.ಬೋರಯ್ಯ ಪ್ರಥಮ ದರ್ಜೆ ಕಾಲೇಜು. ಬರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ತುಂಬಾ ಕಷ್ಟವಾಗುತ್ತಿತ್ತು. ಸರಳೀಕರಿಸಿ ಅದನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ಬೋಧನೆ ಮಾಡುತ್ತಿದ್ದವರು ಪ್ರೊ.ಜೆ.ಎ.ಸೀತಾರಾಂ.
ಪದವಿ ಕಾಲೇಜುಗಳ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಕೇಂದ್ರ ಸರಕಾರ ಮತ್ತು ಯುಜಿಸಿಯಿಂದ ನ್ಯಾಕ್ (ಎನ್‌ಎಎಸಿ)ಕಮಿಟಿ ಕಾಲೇಜು ಗುಣಮಟ್ಟ ವೀಕ್ಷಣೆಗೆ ಬಂದಾಗ ಅದರ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.
ಕಾಲೇಜು ಆಂತರಿಕ ಗುಣಮಟ್ಟ ಕೊಶದ (ಐಕ್ಯೂಎಸಿ) ಟೀಂಗೆ ಸಂಯೋಜಕರಾಗಿ ಕೆಲಸ ಮಾಡಿದ್ದರು. ಅವರು ಇಲ್ಲ ಎಂಬ ನೋವು ಎಲ್ಲರಿಗೂ ಕಾಡುತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಪ್ರೊ.ಕುಮಾರಗೌಡ ಮಾತನಾಡಿ, ಅತ್ಯದ್ಭುತ ವಾಗ್ಮಿಗಳಾದ ಪ್ರೊ. ಸೀತಾರಾಂ ವಿದ್ಯಾರ್ಥಿಗಳ ಪಾಲಿನ ಅಚ್ಚು ಮೆಚ್ಚಿನ ಉಪನ್ಯಾಸಕ. ಪದವಿ ಸೇರಲು ಮುಂದೆ ಬಾರದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ. ಅದೊಂದು ಭಾಷೆ ಅಷ್ಟೇ ಎಂದು ಹುರಿದುಂಬಿಸುತ್ತಿದ್ದ ಪ್ರೊ.ಸೀತಾರಾಂ ಇಲ್ಲದ ನೋವು ಕಾಡುತ್ತಿದೆ ಎಂದು ದುಃಖ ವ್ಯಕ್ತಪಡಿಸಿದರು.
ಹಳೆ ವಿದ್ಯಾರ್ಥಿ ಮಲೆ ಮಾಚಿಕೆರೆ ಸತೀಶ್, ಯುವ ಸಮುದಾಯದ ಸ್ಪೂರ್ತಿಯಾಗಿದ್ದ ಸೀತಾರಾಂ ವಿದ್ಯಾರ್ಥಿಗಳ ಪಾಲಿನ ವಿಲಿಯಂ ಷೇಕ್ಸ್ಪಿಯರ್ ಎಂದೇ ಹೆಸರಾಗಿದ್ದರು. ಅವರಿಂದ ನಾವೆಲ್ಲ ಎಷ್ಟೊಂದು ಕಲಿತೆವು ಎಂದು ಸ್ಮರಿಸಿದರು.
ಹಳೆ ವಿದ್ಯಾರ್ಥಿಯಾದ ಧನ್ಯಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಮಧು, ಉಪನ್ಯಾಸಕರಾದ ಮಹೇಶ್, ಪ್ರಸನ್ನ, ಅಶೋಕ್, ಮಂಜುನಾಥ್ ಸೇರಿದಂತೆ ಅನೇಕರು ಇದ್ದರು.