suddivijayanews14/08/202
ಸುದ್ದಿವಿಜಯ,ಜಗಳೂರು: ಆಶ್ಲೇಷ ಮಳೆಯ ನರ್ತನಕ್ಕೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಣ್ಣಿನ ಮನೆಗಳು ಭಾಗಶಃ ಬಿದ್ದು ಹಾನಿಯಾಗಿವೆ. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮತ್ತು ಆರ್‍ಐ ಧನಂಜಯ್ ಮಾಹಿತಿ ನೀಡಿದ್ದಾರೆ.
ಬುಧವಾರ ಬೆಳಗಿನ ಜಾವ 3 ಗಂಟೆಗೆ ಸರಿಯಾಗಿ ಆರಂಭವಾದ ಮಳೆ 6 ಗಂಟೆಯವರೆಗೂ ಗುಡುಗು, ಸಿಡಿಲು ಸಹಿತ ಅಕ್ಷರಶಃ ಕುಂಭದ್ರೋಣದಂತೆ ಸುರಿದ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ.
ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಶಾರದಮ್ಮ ಅವರ ಕಲ್ಲಿನ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ಮೆದಕೇರನಹಳ್ಳಿ ಗ್ರಾಮದ ಹಾಲಮಮ್ಮ ಅವರ ಮಾಳಿಗೆ ಮನೆ ಕುಸಿದು ಬಿದ್ದು ಮನೆಯವಾಸ ತೊರೆದಿದ್ದಾರೆ.
ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಮಾಳಿಗೆ ಮನೆಯ ಗೋಡೆ ಕುಸಿದು ಮನೆ ನೆಲಸಮ ಆಗಿದೆ ಎಂದು ತಾಲೂಕು ಆಡಳಿತ ವರದಿ ನೀಡಿದೆ.
ಮಳೆಯಿಂದ ಹಾನಿಯಾಗಿರುವ ಗ್ರಾಮಗಳಿಗೆ ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಮತ್ತು ಕಂದಾಯ ನಿರೀಕ್ಷಕ ಧನಂಜಯ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಎನ್‍ಡಿಆರ್‍ಎಫ್ ನಿಯಮಗಳ ಅನುಸಾರ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ವರದಿಸಲ್ಲಿಸುವುದಾಗಿ ತಿಳಿಸಿದ್ದಾರೆ.