ಪ್ರವೀಣ್‌ ನೆಟ್ಟಾರು ಹತ್ಯೆ: ಇಂದು ನಡೆಯಬೇಕಿದ್ದ ಜನೋತ್ಸವ ಸಮಾವೇಶ ರದ್ದು!

Suddivijaya
Suddivijaya July 27, 2022
Updated 2022/07/27 at 11:23 PM

ಸುದ್ದಿವಿಜಯ, ಬೆಂಗಳೂರು: ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಇಂದು ಗುರುವಾರ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶ– ‘ಜನೋತ್ಸವ’ವನ್ನು ರದ್ದುಪಡಿಸಲಾಗಿದೆ.

ಆರ್‌.ಟಿ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ 12.30ಕ್ಕೆ ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ, ಬೊಮ್ಮಾಯಿ, ‘ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ಜನೋತ್ಸವವನ್ನು ರದ್ದುಪಡಿಸಲಾಗಿದೆ’ ಎಂದು ತಿಳಿಸಿದರು.

ಬೆಳಿಗ್ಗೆಯಿಂದ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಪ್ರವೀಣ ಹತ್ಯೆ ಹಾಗೂ ನಮ್ಮ ಪಕ್ಷದ ಯುವಕರ ಆಕ್ರೋಶವನ್ನೂ ಗಮನಿಸಿದೆ. ನನ್ನ ಮನಸ್ಸಿಗೂ ತುಂಬಾ ನೋವಾಗಿದೆ. ಬಹಳ ತೊಳಲಾಟದಲ್ಲಿದ್ದೆ.ಹತ್ಯೆಯಾದ ಪ್ರವೀಣ್‌ ಅವರ ತಾಯಿಯ ಆಕ್ರಂದನ ನೋಡಿದ ಬಳಿಕ ಕಾರ್ಯಕ್ರಮ ರದ್ದುಪಡಿಸಲು ತೀರ್ಮಾನಿಸಿದೆ.

‌ಜನೋತ್ಸವ ಮಾಡಲು ನನ್ನ ಮನಃಸಾಕ್ಷಿ ಒಪ್ಪಲಿಲ್ಲ. ಹಾಗಾಗಿ ಮುಂದೂಡಲು ತೀರ್ಮಾನಿಸಿದೆ. ಪತ್ರಿಕಾಗೋಷ್ಠಿಗೆ ಬರುವ ಮುನ್ನ ನಮ್ಮ ಪಕ್ಷದ ಅಧ್ಯಕ್ಷರಾದ ಜೆ.ಪಿ. ನಡ್ಡಾ ಸೇರಿದಂತೆ ಪ್ರಮುಖರಿಗೆ ಈ ಮಾಹಿತಿಯನ್ನು ನೀಡಲಾಗಿದೆ ಎಂದರು.

ಜನೋತ್ಸವ ನಡೆಸುವ ಮೂಲಕ ನಮ್ಮ ಸರ್ಕಾರ ಜನಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು, ಮುಂದಿನ ಯೋಜನೆಗಳನ್ನು ಘೋಷಿಸಬೇಕು ಎಂದು ನಿಶ್ಚಯಿಸಿದ್ದೆವು. ನಮ್ಮ ಪಕ್ಷದ ಅಮಾಯಕ ಹಾಗೂ ನಿಷ್ಠಾವಂತ ಕಾರ್ಯಕರ್ತ ಪ್ರವೀಣರ ಹತ್ಯೆಯ ನೋವು ಹಾಗೂ ಯುವ ಸಮುದಾಯದ ಭಾವನೆಯನ್ನು ಗಮನಿಸಿದೆ. ಹಾಗಂತ, ಯುವಕರು, ದಲಿತರು, ಹಿಂದುಳಿದವರು ಹಾಗೂ ಮಹಿಳೆಯರ ಪರವಾದ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ.  ಜನಪರ ಕಾರ್ಯಕ್ರಮ–ಯೋಜನೆಗಳನ್ನು ಮಾಧ್ಯಮದವರ ಮೂಲಕ ಪ್ರಕಟಿಸುತ್ತೇವೆ ಎಂದೂ ಅವರು ಹೇಳಿದರು.

ಪ್ರವೀಣ್‌ ಹತ್ಯೆಯ ಆರೋಪಿಗಳನ್ನು ಸದೆಬಡಿಯಲು ಸರ್ಕಾರ ಬದ್ಧ. ಮಾಮೂಲಾದ ಕ್ರಮಗಳ ಹೊರತಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇಂಥ ಕೃತ್ಯದಲ್ಲಿ ಭಾಗಿಯಾದ ಸಂಘಟನೆಗಳನ್ನು ನಾಶ ಮಾಡಲು, ಈಗ ಇರುವ ವ್ಯವಸ್ಥೆಯ ಹೊರತಾಗಿ ವಿಶೇಷವಾದ ಭಯೋತ್ಪಾದನಾ ನಿಗ್ರಹ ಕಮಾಂಡೋವನ್ನು ರಚಿಸಲು ನಾವು ಉದ್ದೇಶಿಸಿದ್ದೇವೆ ಎಂದರು.

ಜನೋತ್ಸವ ರದ್ದಾಗಿರುವುದಕ್ಕೆ ಸಚಿವರಾದ ಸುಧಾಕರ್, ಮುನಿರತ್ನ, ನಾಗರಾಜ್ ಹಾಗೂ ಎಲ್ಲ ಕಾರ್ಯಕರ್ತರ ಕ್ಷಮೆ ಕೇಳುತ್ತೇನೆ ಎಂದೂ ಅವರು ಹೇಳಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!