ಜನರೇ ಎಚ್ಚರ ನಿಮ್ಮನ್ನು ಕೊಲ್ಲಲಿವೆ ಮಾರಕ ಡೆಂಗ್ಯೂ ಸಳ್ಳೆಗಳು!

Suddivijaya
Suddivijaya November 3, 2022
Updated 2022/11/03 at 11:30 AM

ಸುದ್ದಿವಿಜಯ,ಬೆಂಗಳೂರು: ರಾಜ್ಯದಲ್ಲಿ ಮಳೆ ಆರ್ಭಟ ಕಡಿಮೆಯಾದರೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇನ್ನೂ ಕಡಿಮೆಯಾಗ್ತಿಲ್ಲ. ಕಳೆದ ಒಂದು ವಾರದ ಅವಧಿಯಲ್ಲಿ ರಾಜ್ಯದಲ್ಲಿ 195 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಜನವರಿಯಿಂದ ಇದುವರೆಗೆ (ಅಕ್ಟೋಬರ್ 30) ರಾಜ್ಯದಲ್ಲಿ 7,317 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಜ್ವರ, ಮೈ – ಕೈ ನೋವು, ತಲೆ ನೋವು ಸೇರಿದಂತೆ ಡೆಂಗ್ಯೂ ರೋಗ ಲಕ್ಷಣ ಇರುವ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಸೆಪ್ಟೆಂಬರ್ ಅವಧಿಯಲ್ಲಿ ಈ ವರ್ಷ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದೃಢಪಟ್ಟಿವೆ.

2022ರ ಜನವರಿ 1 ರಿಂದ ಅಕ್ಟೋಬರ್ 29ರವರೆಗೆ ಮೈಸೂರಿನಲ್ಲಿ 660, ಉಡುಪಿಯಲ್ಲಿ 477, ದಕ್ಷಿಣ ಕನ್ನಡದಲ್ಲಿ 235, ಚಿತ್ರದುರ್ಗದಲ್ಲಿ 341, ವಿಜಯಪುರದಲ್ಲಿ 363 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಜನವರಿಯಿಂದ ಇದುವರೆಗೆ ರಾಜ್ಯದಲ್ಲಿ 7,317 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಪ್ರಮುಖವಾಗಿ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಉಡುಪಿಯಲ್ಲಿ ರಾಜ್ಯದಲ್ಲಿ 2ನೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ರೋಗ ಲಕ್ಷಣಗಳೇನು..?

ಡೆಂಗ್ಯೂ ವೈರಾಣು 1 ರಿಂದ ರೋಗ ಬಂದರೆ ಸುಲಭಗಿ ಗುಣವಾಗುತ್ತದೆ. ಒಮ್ಮೆ ಡೆಂಗ್ಯೂ ಬಂದವರಿಗೆ ಮತ್ತೊಮ್ಮೆ ಡೆಂಗ್ಯೂ 2 ವೈರಾಣು ಸೋಂಕು ತಗುಲಿದರೆ ಪರಿಣಾಮ ಗಂಭೀರವಾಗುತ್ತದೆ. ದಿಢೀರ್ ಜ್ವರ, ತಲೆ ನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ತೋಳು, ಮೈ – ಕೈ ನೋವು, ಅತಿಸಾರ ಈ ರೀತಿ ಹಲವು ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಂತರ ದೇಹದ ಮೇಲೆ ಕೆಂಪು ದದ್ದು ಹಾಗೂ ಕರುಳಿನಲ್ಲಿ ರಕ್ತಸ್ರಾವ ಆಗುತ್ತದೆ.

ಡೆಂಗ್ಯೂ ಹರಡುವುದು ಹೇಗೆ..?

ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯೇ ಡೆಂಗ್ಯೂ ರೋಗ ಹರಡಲು ಕಾರಣ. ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ. ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

ಈ ಕಾಯಿಲೆಯು ಮೂರು ಹಂತಗಳಲ್ಲಿ ಇರುತ್ತದೆ. ಮೊದಲ ಹಂತದಲ್ಲಿ ಸಾಮಾನ್ಯ ಜ್ವರ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ನಂತರ ಡೆಂಗ್ಯೂ ಶಾಕ್ ಸಿಂಡ್ರೋಮ್ ಉಂಟಾಗಿ ಕರುಳಿನಲ್ಲಿ ರಕ್ತ ಸ್ರಾವ ಆಗಿ ರೋಗಿಗಳು ಸಾವಿಗೀಡಾಗುವ ಸಾಧ್ಯತೆಗಳೇ ದಟ್ಟವಾಗಿರುತ್ತದೆ. ಈ ಸಮಯದಲ್ಲಿ ರೋಗಿಗಳಿಗೆ ಪ್ಲೇಟ್‌ ಲೆಟ್ ನೀಡಿಕೆ ಅನಿವಾರ್ಯ ಆಗಿದೆ.

 ಸರ್ಕಾರ ಕೈಗೊಂಡ ಕ್ರಮ ಏನು..?

ಸೊಳ್ಳೆ ನಿಯಂತ್ರಣ ಜಾಹೀರಾತು, ಕರಪತ್ರಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆಯು ವಿದ್ಯಾರ್ಥಿಗಳಿಂದ ಜಾಥಾ ಮೂಲಕ ಅರಿವು ಮೂಡಿಸುತ್ತಿದೆ. ಎಲ್ಲಾ ಹಂತದಲ್ಲೂ ರ್ಯಾಪಿಡ್ ಟೆಸ್ಟಿಂಗ್ ಟೀಂ ರಚಿಸಿ ತೊಟ್ಟಿಗಳು ಹಾಗೂ ಕೆರೆ, ಕುಂಟೆಗಳಲ್ಲಿ ಉತ್ಪತ್ತಿಯಾಗುವ ಲಾರ್ವಾಗಳನ್ನು ನಾಶ ಮಾಡಲು ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!