ರಾಜ್ಯದಲ್ಲಿ ಮುಂದುವರಿದ ಮಳೆ ಅಬ್ಬರ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ?

Suddivijaya
Suddivijaya July 7, 2022
Updated 2022/07/07 at 1:11 PM

ಸುದ್ದಿವಿಜಯ,ಬೆಂಗಳೂರು: ಕರುನಾಡು ಭಾರಿ ಮಳೆಯಿಂದ ಅಕ್ಷರಶಃ ಮುಳುಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣಾರ್ಭಟ ಜೋರಾಗಿದೆ. ಒಂದಷ್ಟು ದಿನ ಕರಾವಳಿ ಮತ್ತು ಮಲೆನಾಡಿನಲ್ಲಿ ವ್ಯಾಪಕವಾಗಿ ಸುರಿಯುತ್ತಿದ್ದ ಮಳೆ ಜುಲೈ 7 ರಿಂದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ವ್ಯಾಪಕವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುರುವಾರ ಕರಾವಳಿ ವ್ಯಾಪ್ತಿಯ ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಹಾಗೂ ಉತ್ತರ ಒಳನಾಡಿನ ಧಾರವಾಡ, ಹಾವೇರಿ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಕ್ಯಾಸಲ್‌ ರಾಕ್‌ನಲ್ಲಿ 26 ಸೆಂ. ಮೀ., ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ 19 ಸೆಂ. ಮೀ., ಶಿವಮೊಗ್ಗದ ತುಮರಿಯಲ್ಲಿ 18 ಸೆಂ. ಮೀ, ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಯಲ್ಲಿ 16 ಸೆಂ.ಮೀ., ಮಂಗಳೂರು ವಿಮಾನ ನಿಲ್ದಾಣ, ಪುತ್ತೂರು, ಸುಬ್ರಮಣ್ಯದಲ್ಲಿ ತಲಾ 15 ಸೆಂ. ಮೀ., ಕಾರ್ಕಳ, ಉತ್ತರ ಕನ್ನಡ ಜಿಲ್ಲೆಯ ಶಿರಾಲಿ ಮತ್ತು ಗೇರುಸೊಪ್ಪದಲ್ಲಿ ತಲಾ 14 ಸೆಂ. ಮೀ. ಮಳೆ ಬಿದ್ದಿದೆ.

ಕೊಡಗಿನಲ್ಲಿ ಭರ್ಜರಿ ಮಳೆ: ಮಂಗಳವಾರ ಜಿಲ್ಲೆಯ ಹಲವಡೆ ಸ್ವಲ್ಪ ತಣ್ಣಗಾದಂತೆ ಕಂಡು ಬಂದರೂ ಭಾಗಮಂಡಲ ಸೇರಿದಂತೆ ಕಾವೇರಿ ಕಣಿವೆಯಲ್ಲಿ ಧಾರಾಕಾರ ಮಳೆ ಸುರಿದಿದೆ. ಗುರುವಾರ ಬೆಳಗ್ಗೆ 8.30ರ ವರೆಗೆ ಕೊಡಗಿನಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಅಂಗನವಾಡಿ, ಶಾಲಾ – ಕಾಲೇಜುಗಳಿಗೆ ಗುರುವಾರವೂ ರಜೆ ಮುಂದುವರಿಸಲಾಗಿದೆ.

ಬೆಳಗಾವಿ ಜಿಲ್ಲೆಯ ವಿವಿಧೆಡೆ ಬುಧವಾರವೂ ಮಳೆ ಮುಂದುವರಿದಿದ್ದು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ವೇದಗಂಗಾ, ದೂಧಗಂಗಾ, ಕೃಷ್ಣಾ, ಮಲಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಿರುವುದು ಸಹ ನದಿಗಳಲ್ಲಿ ನೀರಿನ ಹರಿವು ಹೆಚ್ಚಲು ಕಾಣವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜುಲೈ 2ರವರೆಗೆ ಜಿಲ್ಲೆಯಲ್ಲಿ ಶೇ.31.18ರಷ್ಟು ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನ ಒಟ್ಟು 3,27,015 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ ಈವರೆಗೆ 1,01,951 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!