ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ 25 ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದಿದ್ದ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮತ್ತೊಂದು ಚಳವಳಿಗೆ ಮುಂದಡಿ ಇಟ್ಟಿದೆ.
ಸಮಗ್ರ ನೀರಾವರಿ, ಕೆರೆ-ಕಟ್ಟೆಗಳ ಅಭಿವೃದ್ಧಿ, ಎಲ್ಲೆಡೆ ಗಿಡಗಳನ್ನು ನೆಡುವುದು, ಯೋಜನೆ ತ್ವರಿತಕ್ಕೆ ಒತ್ತಡ, ಮುಖ್ಯಮಂತ್ರಿ ಬಳಿ ನಿಯೋಗ, ಕಾಮಗಾರಿ ಸ್ಥಳಕ್ಕೆ ಅಧ್ಯಯನ ತಂಡ, ಭೂಮಿ ಸತ್ವ ಕಾಪಾಡಿಕೊಳ್ಳುವಂತೆ ಕೃಷಿಕರಲ್ಲಿ ಜಾಗೃತಿ ಹೀಗೆ ವಿವಿಧ ಹಂತದ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಿದೆ.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿ ಸಂಚಾಲಕರು, ಈಗಾಗಲೇ ಯೋಜನೆ ಜಾರಿ ಆಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಮಠಾಧೀಶರು ಯೋಜನೆ ತ್ವರಿತಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೂ ಕಾಮಗಾರಿ ವಿಳಂಬ ಸೇರಿ ವಿವಿಧ ಸಮಸ್ಯೆಗಳು ಜೀವಂತವಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಸಂಚಾಲಕರ ಸಮಿತಿ ವಿವಿಧ ಹಂತದಲ್ಲಿ ಕಾರ್ಯಕ್ರಮ ರೂಪಿಸಿದೆ ಎಂದು ಮಾಹಿತಿ ನೀಡಿದರು.
ಸಂಚಾಲಕ ಜಿ.ಎಸ್.ಉಜ್ಜನಪ್ಪ ಮಾತನಾಡಿ, ಜಿಲ್ಲ್ಲೆ ಪ್ರವೇಶಿಸಿರುವ ಭದ್ರೆಗೆ ಗೌರವ ಸಮರ್ಪಿಸುವ ಕಾರ್ಯಕ್ರಮವನ್ನು ಹಿರಿಯೂರು ನಾಗರಿಕ ಸಮಿತಿ ಡಿ.27ರಂದು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಬಳಿಕ ಸಮಿತಿ ವತಿಯಿಂದ ವಿವಿಧ ಹಂತದ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಸಮಿತಿಗೆ 25 ವರ್ಷ ಆಗಿದ್ದು, ಈ ಅವಧಿಯಲ್ಲಿ ಚಳವಳಿಯೊಂದಿಗೆ ಮುಂಚೂಣಿಯಲ್ಲಿದ್ದ ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಎಸ್.ಎಂ.ಸದಾನಂದಯ್ಯ, ಬಿ.ಟಿ.ಚನ್ನಸಪ್ಪ ಸೇರಿ ಎಲೆಮರೆ ಕಾಯಿಯಂತೆ ಕೆಲಸ ನಿರ್ವಹಿಸಿದ ಅನೇಕರು ಮರಣ ಹೊಂದಿದ್ದಾರೆ. ಅವರೆಲ್ಲರನ್ನು ಸ್ಮರಿಸಲು ಹಿನ್ನೋಟ-ಮುನ್ನೋಟ ಕಾರ್ಯಕ್ರಮ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಸಂಚಾಲಕ ಚಳ್ಳಕೆರೆ ಬಸವರಾಜ್ ಮಾತನಾಡಿ, ಬೃಹತ್ ನಗರಗಳ ಶ್ರೀಮಂತರ ಕಣ್ಣು ಜಿಲ್ಲೆಯ ಭೂಮಿ ಮೇಲೆ ಬಿದ್ದಿದ್ದು, ದುಬಾರಿ ಬೆಲೆ ಆಸೆ ತೋರಿಸಿ ಜಮೀನು ಖರೀದಿ ಮಾಡುವ ಜಾಲ ಆರಂಭವಾಗಿದೆ. ಆದ್ದರಿಂದ ಮಾರಾಟ ಮಾಡದಂತೆ ರೈತರ ಮನವೊಲಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ಸಂಚಾಲಕರ ಸಮಿತಿ ಸಭೆಯಲ್ಲಿ ಚರ್ಚೆ ಆಗಿರುವ ಈ ಎಲ್ಲ ವಿಷಯಗಳನ್ನು ಪಿ.ಕೋದಂಡರಾಮಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಜನರ ಸಭೆ ಕರೆದು ಒಪ್ಪಿಗೆ ಪಡೆದ ಬಳಿಕ ಹಂತ-ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.
ಸಂಚಾಲಕ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಮುಖ್ಯವಾಗಿ ಬಯಲುಸೀಮೆ ಜಲಪಾತ್ರೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವಂತೆ, ಕೆರೆ-ಕಟ್ಟೆಗಳನ್ನು ಭದ್ರಪಡಿಸುವಂತೆ, ಒತ್ತುವರಿ ತೆರವು, ಹೂಳು ತೆಗೆಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ನಡೆಸಲಾಗುವುದು. ಯೋಜನೆಯಿಂದ ಕೈಬಿಟ್ಟು ಹೋಗಿರುವ ಮೊಳಕಾಲ್ಮೂರು ಸೇರಿ ಜಿಲ್ಲೆಗೆ ಸಮಗ್ರ ನೀರಾವರಿ ಕಲ್ಪಿಸುವಂತೆ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.
ಸಂಚಾಲಕರಾದ ಈ.ಮಹೇಶ್‌ಬಾಬು, ಟಿ.ಶಿವಪ್ರಕಾಶ್, ಕೂನಿಕೆರೆ ರಾಮಣ್ಣ ಇದ್ದರು.
ಜಲತಜ್ಞರ ಭಾವಚಿತ್ರ ಜಾಥಾ
ಕೆರೆ-ಕಟ್ಟೆಗಳ ನಿರ್ಮಿಸಿದ ಶ್ರೀಗುರು ತಿಪ್ಪೇರುದ್ರಸ್ವಾಮಿ, ವಿವಿ ಸಾಗರ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪಮ್ಮ, ಹೊಂಡಗಳ ಮೂಲಕ ಜನರ ಬಾಯಾರಿಕೆ ತಣಿಸಿದ ಬಿಚ್ಚುಗತ್ತಿ ಭರಮಣ್ಣ ನಾಯಕರ ಭಾವಚಿತ್ರಗಳ ಜಾಥಾ ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು ತಿಳಿಸಿದರು.
ಹಿರಿಯೂರಲ್ಲಿ ಆರಂಭಿಸಿ, ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಮೂಲಕ ನಾಯಕನಹಟ್ಟಿಗೆ ತೆರಳಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಜನರಲ್ಲಿ ಹೋರಾಟದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.