ಸುದ್ದಿವಿಜಯ,ಭರಮಸಾಗರ: ಬಹುವಾರ್ಷಿಕ ಬೆಳೆಯಾದ ಅಡಕೆಗೆ ರೈತರು ಒತ್ತು ನೀಡುತ್ತಿರುವುದರಿಂದ ಭವಿಷ್ಯದಲ್ಲಿ ಆಹಾರ ಅಭದ್ರತೆಗೆ ಎಡೆಮಾಡಿಕೊಡಬಹುದು. ಎಣ್ಣೆಕಾಳು ಬೆಳೆಗಳಾದ ಶೇಂಗಾ, ಕಡಲೆ, ದ್ವಿದಳ ಧಾನ್ಯಗಳನ್ನು ಬೆಳೆಯುವ ಕಡೆ ಹೆಚ್ಚು ಗಮನ ಹರಿಸಬಹುದು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯ ವಿಜ್ಞಾನಿ ಬಿ.ಓ.ಮಲ್ಲಿಕಾರ್ಜುನ್ ರೈತರಿಗೆ ಸಲಹೆ ನೀಡಿದರು.
ಭರಮಸಾಗರ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಹಾಗೂ ಕೃಷಿ ಇಲಾಖೆ, ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ರೈತರ ತರಬೇತಿ ಕಾರ್ಯಕ್ರಮವನ್ನು ಕಾಲಗೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರಮುಖ ಆಹಾರ ಬೆಳೆಗಳಾದ ರಾಗಿ, ಜೋಳ, ಶೇಂಗಾ ಹಾಗೂ ಸಿರಿಧಾನ್ಯಗಳ ಬೆಳೆಗಳ ವಿಸ್ತರಣೆಯನ್ನು ಹೆಚ್ಚಿಸಬೇಕು.
ಮುಂದುವರೆದು ಎಣ್ಣೆಕಾಳು ಬೆಳೆಗಳಾದ ಶೇಂಗಾ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರಯೋಜನಗಳನ್ನು ಪಡೆದು ಬೆಳೆಯಬೇಕು ಎಂದರು. ಮುಂದಿನ ದಿನಗಳಲ್ಲಿ ಕಂಪನಿಯ ವ್ಯಾಪ್ತಿಯಲ್ಲಿ ಎಣ್ಣೆ ಕಾಳು ಬೆಳೆಗಳ ವಿಸ್ತರಣೆ ಜಾಸ್ತಿಯಾದರೆ ಶುದ್ಧವಾದ ಹಾಗೂ ರುಚಿಕರವಾದ ಅಡುಗೆ ಎಣ್ಣೆಗಳನ್ನು ತಯಾರಿಸುವ ಘಟಕಗಳನ್ನು ಸ್ಥಾಪಿಸಬಹುದು ಎಂದರು.
ತೋಟಗಾರಿಕೆ ತಜ್ಞರಾದ ಬಸವನಗೌಡ ಎಂ.ಜಿ ಇವರು ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಹೆಚ್ಚಾಗುತ್ತಿದ್ದು ರೈತರು ನೀರಿಗೆ ಅನುಗುಣವಾಗಿ ತೋಟಗಳನ್ನು ಮಾಡಿಕೊಳ್ಳುವುದು ಉತ್ತಮ ಎಂದು ತಿಳಿಸಿದರು. ಅತಿಯಾದ ಅಂತರ್ಜಲ ಬಳಸುವುದರಿಂದ ಮುಂದಿನ ದಿನಮಾನಗಳಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ತೋಟಗಳನ್ನು ಮಾಡಿಕೊಂಡರೆ ನಾವು ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದೆಂದು ತಿಳಿಸಿದರು.
ಮಣ್ಣು ವಿಜ್ಞಾನ ವಿಷಯ ತಜ್ಞರಾದ ಎಚ್.ಎಂ. ಸಣ್ಣಗೌಡರ್ ಮಾತನಾಡಿ, ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಆರೋಗ್ಯವನ್ನು ಹೆಚ್ಚಿಸಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು. ನ್ಯಾನೋ ಯೂರಿಯಾ ಗೊಬ್ಬರ ಬಳಕೆಯಿಂದ ರೈತರು ಯೂರಿಯಗೊಬ್ಬರಕ್ಕೆ ಮಾಡುವ ಖರ್ಚನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ತಜ್ಞರಾದ ಡಾಕ್ಟರ್ ಅವಿನಾಶ್, ರಘುರಾಜ್ ಹಾಗೂ ಪ್ರಗತಿಪರ ರೈತರು, ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಭಾಗವಹಿಸಿದ್ದರು