ಸುದ್ದಿವಿಜಯ ಭರಮಸಾಗರ:( ವಿಶೇಷ)ಇಲ್ಲಿನ ಐತಿಹಾಸಿಕ ಕೆರೆಯಾದ ಬಿಚ್ಚುಗತ್ತಿ ಭರಮಣ್ಣನಾಯಕ ಕಟ್ಟಿಸಿದ್ದ ಅಂದಾಜು 990 ಎಕರೆ ಇರುವ ಕೆರೆ ಕುಂಭದ್ರೋಣ ಮಳೆಗೆ ಕೋಡಿಬಿದ್ದು ನೀರು ತುಪ್ಪದಳ್ಳಿಕೆರೆ ಸೇರುತ್ತಿದೆ.
ನಾಲ್ಕುದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅಪಾರ ಪ್ರಮಾಣದ ನೀರು ಕೆರೆಗೆ ಸೇರುತ್ತಿದ್ದು ಸ್ವಾಭಾವಿಕವಾಗಿಯೇ ಕೆರೆ ತುಂಬಿ ಕೋಡಿ ಬಿದ್ದಿದೆ. ಕಳೆದ 2021ರ ಸೆ.29 ರಂದು ತುಂಗಭದ್ರ ನದಿಯಿಂದ ನೀರು ಪೈಪ್ ಲೈನ್ ಮೂಲಕ ಹರಿದು ಮೂರು ತಿಂಗಳ ನಂತರ ಕೆರೆ ತುಂಬಿ ಕೋಡಿ ಬಿದ್ದಿತ್ತು. ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ನಂತರ ಸುರಿದ ಮಳೆಯಿಂದಾಗಿ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಪ್ರಸ್ತುತ ಕೆರೆ ಸಮುದ್ರದಂತೆ ಭಾಸವಾಗುತ್ತಿದೆ.
ಭರಮಸಾಗರ-ಬಿದರಕೆರೆ ಮಾರ್ಗದಲ್ಲಿರುವ ಕೋಡಿಯ ರಸ್ತೆಯ ಮೇಲೆ ನೀರು ಹಾಲ್ನೊರೆಯಂತೆ ಹರಿಯುತ್ತಿದ್ದು ಅದನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ. ಸಿರಿಗೆರೆಯ ಶಾಂತಿವನದ ಬ್ಯಾರೇಜ್ ತುಂಬಿ ಕೊಳಹಾಳ್ ಕೆರೆ ಸೇರುತ್ತದೆ. ನಂತರ ಆ ಕೆರೆಯ ನೀರು ಚೌಡಮ್ಮನ ಹಳ್ಳದ ಮೂಲಕ ಭರಮಸಾಗರ ಕೆರೆ ಸೇರುತ್ತದೆ.
ಮತ್ತೊಂದು ಮಾರ್ಗವಾದ ಹನುಮನಹಳ್ಳಿ ಮತ್ತು ಚೀಳಂಗಿ ಮಾರ್ಗದಲ್ಲಿರುವ ಕಾಲುವೆಯಿಂದ ಅಪಾರ ಪ್ರಮಾಣದ ನೀರು ಕೆರೆ ಸೇರುತ್ತಿದ್ದು ಸ್ವಾಭಾವಿಕವಾಗಿಯೇ ಕೆರೆ ಭರ್ತಿಯಾಗಿದೆ.
ಸಿರಿಗೆರೆ ಶಾಂತಿವನದ ಗುಡ್ಡದ ಸುತ್ತಮುತ್ತಲ ಗ್ರಾಮಗಳಾದ ಅಳವೂದರ, ಲಂಬಾಣಿಹಟ್ಟಿ, ಕರಿಯಮ್ಮನಹಟ್ಟಿ, ಚೀಳಂಗಿ, ಹಂಪನೂರು, ಕೊಳಹಾಳು, ಹೆಗ್ಗೆರೆ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ನೀರು ಕೆರೆ ಸೇರುತ್ತಿದ್ದು ಜನರು ಮೀನು ಹಿಡಿಯಲು ಗಾಳ ಹಾಕುತ್ತಿರುವ ಚಿತ್ರ ಕಂಡು ಬಂತು.
ತುಂಗಭದ್ರಾ ನದಿಯ ನೀರು ಬಂದ್:
ಸಿಕ್ಕಪಟ್ಟೆ ಮಳೆ ಸುರಿದು ಕೆರೆಗೆ ನೀರು ಬರುತ್ತಿರುವ ಹಿನ್ನೆಲೆ ಹರಿಹರದ ದೀಟೂರು ಗ್ರಾಮದಿಂದ ಭರಮಸಾಗರ ಕೆರೆ ಪೈಪ್‍ಲೈನ್ ಮೂಲಕ ನೀರು ಹರಿವುವನ್ನು ನಿಲ್ಲಿಸಲಾಗಿದೆ. ಕಳೆದ ಸೆ.24 ರಂದು ನೀರು ನಿಲ್ಲಿಸಲಾಗಿದೆ. 42 ಕೆರೆ ಹೋಗುವ ನೀರಿನ ಪರಿಕ್ಷಾರ್ಥ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ನೀರಾವರಿ ನಿಗಮದ ಎಇ ಮನೋಜ್‍ಕುಮಾರ್ ವಿಕಗೆ ಮಾಹಿತಿ ನೀಡಿದ್ದಾರೆ.
ರೈತರ ಬಾಳು ಬಂಗಾರ:
ಕೆರೆಯ ಕೋಡಿ ಬಿದ್ದಿದ್ದು ಅಪಾರ ಸಂತೋಷವಾಗಿದೆ. ತರಳಬಾಳು ಶ್ರೀಗಳ ಪ್ರಯತ್ನದ ಫಲವಾಗಿ ಕಳೆದ ವರ್ಷ ತುಂಗಭದ್ರೆ ಕೆರೆ ಸೇರಿದಳು. ಈಗ ಸ್ವಾಭಾವಿಕ ಮಳೆಯಿಂದ ಕೆರೆ ಭರ್ತಿಯಾಗಿದೆ. ನೀರಿದ್ದರೆ ರೈತರ ಬಾಳು ಬಂಗಾರವಾದಂತಾಗುತ್ತದೆ. ಸದ್ಯಕ್ಕೆ ಮಳೆ ನಿಂತರೆ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಇಲ್ಲವಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ.
-ಕೆ.ಇ.ರಾಜಪ್ಪ, ಕೊಳಹಾಳ್ ಗ್ರಾಪಂ ಸದಸ್ಯ
ಕೆರೆ ಏರಿಯನ್ನು ಆದಷ್ಟು ಬೇಗ ದುರಸ್ತಿಯಾಗಬೇಕು!
ಕಳೆದ ಸಲ 2021ರಲ್ಲಿ ಏತ ನೀರಾವರಿ ಯೋಜನೆ ಮತ್ತು ಮಳೆ ನೀರಿನಿಂದ ಕೆರೆ 11ವರುಷ ಗಳ ನಂತರ ತುಂಬಿ ಹರಿದಿತ್ತು. ಆದರೆ ಕೆರೆ ನೀರು ಲೀಕೇಜ್ ಆದ ಕಾರಣ ಕೆರೆ ಏರಿ ದುರಸ್ತಿ ಕೆಲಸಕ್ಕೆ ಕಳೆದ ಫೆಬ್ರವರಿ ತಿಂಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸಿಲಾಗಿತ್ತು. ಆದರೆ ಈಗ ಅರ್ಧ ಕೆರೆ ಕೇವಲ ಒಂದೇ ಮಳೆಯಿಂದ ತುಂಬಿ ಕೋಡಿ ಬಿದ್ದಿದ್ದು ಕೆರೆ ಏರಿಯನ್ನು ಆದಷ್ಟು ಬೇಗ ದುರಸ್ತಿಯಾಗಬೇಕು.
-ಪ್ರದೀಪ್, ಎಸ್‍ಡಿಎಂಸಿ ಮಾಜಿ ಅಧ್ಯಕ್ಷರು, ಯುವ ಮುಖಂಡರು ಭರಮಸಾಗರ