ಭರಮಸಾಗರ: ಮುಸ್ಲೀಮರು ಈ ದೇಶದ ಪ್ರಜೆಗಳು, ಬಿಜೆಪಿಯಲ್ಲಿ ಬೇಧವಿಲ್ಲ!

Suddivijaya
Suddivijaya November 19, 2022
Updated 2022/11/19 at 2:32 PM

ಸುದ್ದಿವಿಜಯ,ಭರಮಸಾಗರ: ಕೆಲವರು ಮತ ಬ್ಯಾಂಕ್‍ಗಾಗಿ ಬಿಜೆಪಿಯವರು ಮುಸ್ಲೀಮರ ವಿರೋಧಿ ಎಂದು ಸುಳ್ಳು ಹೇಳುತ್ತಾ ಅಣ್ಣ ತಮ್ಮಂದಿರಂತಿರುವ ಹಿಂದೂ ಮುಸ್ಲಂರನ್ನು ಪ್ರತ್ಯೇಕವಾಗಿ ನೋಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆದರೆ ನಾವು ಮುಸಲ್ಮಾನರನ್ನೂ ಈ ದೇಶದ ಪ್ರಜೆಗಳು ಎಂದೇ ಭಾವಿಸಿದ್ದೇವೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಭರಮಸಾಗರ ಹೋಬಳಿಯ ಆಜಾದ್‍ನಗರ ಮತ್ತು ನೆಲ್ಲಿಕಟ್ಟೆ ಗೊಲ್ಲರಹಳ್ಳಿ ಗ್ರಾಮಗಳಲ್ಲಿ 2.5 ಕೋಟಿ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಡಾಂಬರ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮತ್ತು ಅಜಾದ್ ನಗರದಲ್ಲಿನಿರ್ಮಾಣವಾಗಿರುವ ನೂತನ ಸರಕಾರಿ ಶಾಲಾ ಕೊಠಡಿಗಳ ಉದ್ಘಾಟನೆ ಶನಿವಾರ ನೆರವೇರಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೂ ಭೇದ ಭಾವ ಮಾಡದೆ ಉಚಿತವಾಗಿ ಕೋವಿಡ್ ಲಸಿಕೆ ಹಾಕಿಸಿದ್ದಾರೆ. ಕೋವಿಡ್ ಬಂದು ಮೂರು ವರ್ಷಗಳಾದರೂ ದೇಶದ ನೂರು ಕೋಟಿ ಜನರಿಗೆ ಉಚಿತವಾಗಿ ಪಡಿತರ ನೀಡುತ್ತಿದ್ದಾರೆ. ಅವರೇನಾದರೂ ಹಿಂದೂ ಮುಸ್ಲೀಮರು ಎಂದು ಪ್ರತ್ಯೇಕವಾಗಿ ನೋಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಮುಸ್ಲೀಮರ ಕತ್ತು ಕೊಯ್ಯುತ್ತಾರೆ ಎಂದು ಕೆಲವರು ಅಪಪ್ರಚಾರ ಮಾಡ್ತಾರೆ. ಅದು ವೋಟ್ ಬ್ಯಾಂಕ್ ರಾಜಕಾರಣ. ಮುಸ್ಲೀಮರು ಈ ದೇಶದ ಪ್ರಜೆಗಳು. ಇಂದು ವಿಶ್ವವೇ ನರೇಂದ್ರ ಮೋದಿ ಅವರನ್ನು ವಿಶ್ವಗುರು ಎಂದು ಒಪ್ಪಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಅತ್ಯಂತ ದೊಡ್ಡ ಹೊಳಲ್ಕೆರೆ ಕ್ಷೇತ್ರದಲ್ಲಿ 493 ಹಳ್ಳಿಗಳಿಗೆ 3500 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದೇನೆ. ರಸ್ತೆ, ನೀರು, ಶುದ್ಧ ಕುಡಿಯುವ ನೀರಿನ ಘಟಕ, ಗುಣಮಟ್ಟದ ಶಾಲೆಗಳು, ಮನೆ ಮನೆಗೆ ಕುಡಿಯುವ ನೀರಿನ ಸರಬರಾಜು ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿದ್ದೇನೆ. ಮತ ಹಾಕುವಾಗ ಅಭಿವೃದ್ಧಿ ಆಧಾರಿತ ವ್ಯಕ್ತಿಗೆ ಮತಹಾಕಿ. ಧರ್ಮ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ವ್ಯಕ್ತಿಗಳಿಗೆ ಮತ ಹಾಕಬೇಡಿ.

 ಭಮರಸಾಗರ ಹೋಬಳಿಯ ಅಜಾದ್‍ನಗರ ಮತ್ತು ನೆಲ್ಲಿಕಟ್ಟೆ ಗೊಲ್ಲರಹಳ್ಳಿಯಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಶಾಸಕ ಎಂ.ಚಂದ್ರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ಭಮರಸಾಗರ ಹೋಬಳಿಯ ಅಜಾದ್‍ನಗರ ಮತ್ತು ನೆಲ್ಲಿಕಟ್ಟೆ ಗೊಲ್ಲರಹಳ್ಳಿಯಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಶಾಸಕ ಎಂ.ಚಂದ್ರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.

ನಾನು ಕಳೆದ ಚುನಾವಣೆಯಲ್ಲಿ 48 ಸಾವಿರಕ್ಕೂ ಹೆಚ್ಚು ಲೀಡ್‍ನಲ್ಲಿ ಗೆದ್ದಿದ್ದೇನೆ. ಅಜಾದ್‍ನಗರದ ಮಸೀದಿ, ಗೊಲ್ಲರಹಳ್ಳಿ ದೇವಸ್ಥಾನಕ್ಕೆ ಬೇಧ ಭಾವ ಮಾಡದೇ ಅನುದಾನ ನೀಡಿದ್ದೇನೆ. ಎಲ್ಲ ಸಮುದಾಯದ ಮತಹಾಕಿದ್ದಾರೆ. ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದೇನೆ. ವೋಟ್ ಹಾಕುವುದು ನಿಮಿಷದ ಕೆಲಸ ಆದರೆ ಆಲೋಚಿಸಿ ಮತ ಹಾಕಿ ಎಂದರು ಹೇಳಿದರು.

ಈವೇಳೆ ಮಂಡಲ್ ಬಿಜೆಪಿ ಅಧ್ಯಕ್ಷ ಶೈಲೇಶ್ ಪಾಟೀಲ್, ಗ್ರಾಮೀಣ ಜನರ ಸಮಸ್ಯೆಗಳನ್ನು ಮನಗಂಡಿರುವ ಶಾಸಕ ಚಂದ್ರಪ್ಪ ಅವರು ವಿದ್ಯುತ್ ಸಮಸ್ಯೆ ನೀಗಿಸಲು ಅಜ್ಜಪ್ಪನಹಳ್ಳಿ ಬಳಿ 10 ಎಕರೆ ಜಾಗದಲ್ಲಿ 250 ಕೋಟಿ ವೆಚ್ಚದ ವಿದ್ಯುತ್ ಸರಬರಾಜು ಘಟಕವನ್ನು ನಿರ್ಮಿಸಿದ್ದಾರೆ. ಜೋಗದಿಂದ ನೇರವಾಗಿ ವಿದ್ಯುತ್ ಈ ಪವರ್ ಸ್ಟೇಷನ್ ಬಂದು ಈ ಭಾಗದ ಜನರಿಗೆ ವಿದ್ಯುತ್ ಸಮಸ್ಯೆ ನೀಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರತಿ ಹಳ್ಳಿಹಳ್ಳಿಗೂ ರಸ್ತೆಗಳನ್ನು ನಿರ್ಮಿಸಿದ್ದಾರೆ. ಕೆಲಸ ನೋಡಿ ಮತಹಾಕಿ ಎಂದರು.

ಈ ವೇಳೆ ತಾಪಂ ಇಒ ಎಚ್.ಹನುಮಂತಪ್ಪ, ಇಮಾಂ ಸಾಬ್, ಗನ್ನಿಸಾಬ್, ರಫೀಕ್, ದಾದಾಪೀರ್, ಚಮನ್, ಬಸವರಾಜಪ್ಪ, ಮಲ್ಲಪ್ಪ, ತಿಪ್ಪೇಸ್ವಾಮಿ, ರಂಗಸ್ವಾಮಿ, ಹನುಮಂತಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!